ADVERTISEMENT

ಹೆದ್ದಾರಿ ಗಸ್ತು ವಾಹನ: ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 15:37 IST
Last Updated 24 ಜನವರಿ 2025, 15:37 IST
ಸೋಮೇನಹಳ್ಳಿ ಗ್ರಾಮದ ಪಿಎಂಶ್ರೀ ಶಾಲೆಯಲ್ಲಿ ಗಸ್ತು ವಾಹನ ಕಾರ್ಯಾಚರಣೆ ಹಾಗೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಯಿತು
ಸೋಮೇನಹಳ್ಳಿ ಗ್ರಾಮದ ಪಿಎಂಶ್ರೀ ಶಾಲೆಯಲ್ಲಿ ಗಸ್ತು ವಾಹನ ಕಾರ್ಯಾಚರಣೆ ಹಾಗೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಯಿತು   

ಗುಡಿಬಂಡೆ: ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದ ಪಿಎಂಶ್ರೀ ಶಾಲೆಯಲ್ಲಿ ಪೆರೇಸಂದ್ರ ಪೊಲೀಸ್ ಠಾಣೆಯಿಂದ ಗಸ್ತು ವಾಹನ ಹಾಗೂ ತುರ್ತು ಸಹಾಯವಾಣಿ ಸಂಖ್ಯೆ 112 ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಹಾಗೂ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಹೆದ್ದಾರಿ ಗಸ್ತು ವಾಹನದ ಪೊಲೀಸ್ ಸಿಬ್ಬಂದಿ ಗಂಗಪ್ಪ ಮಾತನಾಡಿ, ‘ತಮ್ಮ ಮನೆಗಳಲ್ಲಿ ಪೋಷಕರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವುವಂತೆ ತಿಳಿವಳಿಕೆ ಮೂಡಿಸಿ, ರಸ್ತೆ ಅಪಘಾತ ತಡೆಗಟ್ಟಿ ಜೀವ ರಕ್ಷಿಸಿಕೊಳ್ಳ ಬೇಕಿದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸುವಂತೆ ಪೋಷಕರಲ್ಲಿ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ಅಪರಾಧ ಕೃತ್ಯ, ಕಾನೂನು ಬಾಹಿರ ಚಟುವಟಿಕೆ ನಡೆದರೆ 112 ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ಧಾವಿಸಿ ಕ್ರಮಕೈಗೊಳ್ಳುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಬಹುದು. ಮೇಲಧಿಕಾರಿಗಳ ಸೂಚನೆಯಂತೆ ತುರ್ತು ಸಹಾಯವಾಣಿ ಹಾಗೂ ಗಸ್ತು ವಾಹನದ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದರು.

ADVERTISEMENT

ಹೆದ್ದಾರಿ ಗಸ್ತು ವಾಹನದ ಮುಖ್ಯ ಉದ್ದೇಶ ಅಪರಾಧ ತಡೆಗಟ್ಟುವುದಾಗಿದೆ. ವಾಹನದಲ್ಲಿ ಚಾಲಕ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿ ಇರಲಿದ್ದು, ಎಲ್ಲ ಕರೆಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸುವರು. ಅಪಘಾತ, ಕಳ್ಳತನ, ಬೆಂಕಿ ಅವಘಡಗಳಂತ ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿದರೆ ಸಿಬ್ಬಂದಿ ಬರಲಿದ್ದಾರೆ ಎಂದು ತಿಳಿಸಿದರು.

ರಮೇಶ್ ಮಾತನಾಡಿ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕ್ಕೆ ಸಿಲುಕಿದರೆ, ಕಾನೂನು ಸುವ್ಯವಸ್ಥೆಗೆ ಯಾರಾದರೂ ಧಕ್ಕೆ ತಂದರೆ 112ಕ್ಕೆ ಕರೆ ಮಾಡಬಹುದು. ಪಟ್ಟಣ ಪ್ರದೇಶದಲ್ಲಿ 15 ನಿಮಿಷದೊಳಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ 45 ನಿಮಿಷದೊಳಗೆ ವಾಹನವು ಕರೆ ಮಾಡಿದ ಸ್ಥಳ ತಲುಪಿ ಸಮಸ್ಯೆ ಆಲಿಸಲಿದ್ದಾರೆ ಎಂದರು.

ಮುಖ್ಯಶಿಕ್ಷಕ ನಾಗಲಿಂಗಪ್ಪ, ಸಹ ಶಿಕ್ಷಕರು, ಪೋಷಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.