
ಶಿಡ್ಲಘಟ್ಟ ತಾಲ್ಲೂಕಿನ ಎಚ್. ಕ್ರಾಸ್‌ನಲ್ಲಿರುವ ರೇಷ್ಮೆಗೂಡು ಮಾರುಕಟ್ಟೆ
ಶಿಡ್ಲಘಟ್ಟ: ಒಂದೆಡೆ ₹200 ಕೋಟಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣ ಕಾಮಗಾರಿ ವೇಗವಾಗಿ ಸಾಗುತ್ತಿದ್ದರೆ, ಮತ್ತೊಂದೆಡೆ ತಾಲ್ಲೂಕಿನ ಎಚ್. ಕ್ರಾಸ್‌ನಲ್ಲಿರುವ ರೇಷ್ಮೆಗೂಡು ಮಾರುಕಟ್ಟೆ ಮುಚ್ಚುವ ಸ್ಥಿತಿಗೆ ತಲುಪಿದೆ.
1983ರಲ್ಲಿ ವಿಶ್ವ ಬ್ಯಾಂಕ್ ನೆರವಿನಿಂದ ಸುಮಾರು ಐದು ಎಕರೆ ಪ್ರದೇಶದಲ್ಲಿ ಎಚ್. ಕ್ರಾಸ್ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪಿಸಲಾಗಿತ್ತು. ಜಂಗಮಕೋಟೆ, ಕೈವಾರ, ವೇಮಗಲ್, ಹೊಸಕೋಟೆ ಮೊದಲಾದ ಸುತ್ತಲಿನ ಭಾಗದ ರೇಷ್ಮೆ ಬೆಳೆಗಾರರಿಗೆ ಸಮೀಪದಲ್ಲೇ ಹರಾಜು ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಮಾರುಕಟ್ಟೆಯನ್ನು ಆರಂಭಿಸಲಾಗಿತ್ತು.
ಅಂದಿನ ಕೇಂದ್ರ ಕೈಮಗ್ಗ ಅಭಿವೃದ್ಧಿ ಇಲಾಖೆ ಆಯುಕ್ತ ಐಎಎಸ್ ಅಧಿಕಾರಿ ಎಸ್.ಕೆ. ಮಿಶ್ರಾ ಅವರಿಂದ ಉದ್ಘಾಟನೆಗೊಂಡ ಈ ಮಾರುಕಟ್ಟೆ ಒಂದು ಕಾಲದಲ್ಲಿ ರೈತರು ಹಾಗೂ ವ್ಯಾಪಾರಿಗಳ ಆಗಮನದಿಂದ ಕಂಗೊಳಿಸುತ್ತಿತ್ತು. ನೂರಾರು ರೈತರು ತಾವು ಬೆಳೆದ ರೇಷ್ಮೆಗೂಡು ತಂದು ಮಾರಾಟ ಮಾಡುತ್ತಿದ್ದರು. ಸುತ್ತಮುತ್ತಲಿನ ಜಿಲ್ಲೆಗಳಿಂದ ರೀಲರುಗಳು ಆಗಮಿಸಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದರು.
ಆದರೆ ಕಾಲಕ್ರಮೇಣ ಪರಿಸ್ಥಿತಿ ಬದಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ರೇಷ್ಮೆಗೂಡು ಬರುತ್ತಿಲ್ಲ. ಹರಾಜು ವೇದಿಕೆ ಖಾಲಿಯಾಗಿದೆ. ತೂಕಮಾಪಕ ಯಂತ್ರಗಳು ಬಳಕೆಯಿಲ್ಲದೆ ದೂಳು ಹಿಡಿದಿವೆ. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳು ನಿರ್ವಹಣೆ ಕೊರತೆಯಿಂದ ಜಡ್ಡುಹಿಡಿದಿವೆ. ರೇಷ್ಮೆ ಗೂಡನ್ನು ಹಾಕಿಡುತ್ತಿದ್ದ ಜಾಲರಿಗಳು ಖಾಲಿ ಖಾಲಿಯಾಗಿವೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಮಾರುಕಟ್ಟೆ ಇಂದು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿದೆ.
ರೈತರು ನೇರವಾಗಿ ಶಿಡ್ಲಘಟ್ಟದ ಮುಖ್ಯ ಮಾರುಕಟ್ಟೆ ಅಥವಾ ಖಾಸಗಿ ಖರೀದಿದಾರರಿಗೆ ರೇಷ್ಮೆಗೂಡು ಮಾರಾಟ ಮಾಡುತ್ತಿರುವುದು, ಎಚ್.ಕ್ರಾಸ್‌ಗೆ ರೇಷ್ಮೆಗೂಡು ತರುತ್ತಿದ್ದ ವಿವಿಧ ಭಾಗಗಳ ರೈತರು ಈಗ ರೇಷ್ಮೆ ಬೆಳೆ ಬೆಳೆಯದಿರುವುದು, ಬೆಲೆ ಏರುಪೇರು ಇವೆಲ್ಲವೂ ಎಚ್. ಕ್ರಾಸ್ ಮಾರುಕಟ್ಟೆ ನಿಲ್ಲಲು ಕಾರಣಗಳೆಂದು ತಿಳಿದುಬಂದಿದೆ.
ಇತ್ತೀಚೆಗೆ ಮಾರುಕಟ್ಟೆ ಕಟ್ಟಡವನ್ನು ಕೊಂಚ ನವೀಕರಿಸಿ ಸುಣ್ಣ ಬಣ್ಣ ಹಚ್ಚಲಾಗಿದೆ. ಹಾನಿಗೊಂಡಿದ್ದ ಶೀಟ್‌ಗಳನ್ನು ತೆಗೆದು ಫೈಬರ್ ಶೀಟ್‌ಗಳನ್ನು ಅಳವಡಿಸಲಾಗಿದೆ. ಮಳೆ ನೀರು ಒಳನುಗ್ಗದಂತೆ ಕ್ರಮ ಕೈಗೊಳ್ಳಲಾಗಿದೆ. ಇ-ಬಿಡ್ ಹಾಗೂ ಇ-ಪೇಮೆಂಟ್ ವ್ಯವಸ್ಥೆ ಜಾರಿಗೆ ತರಲು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳುವರಾದರೂ, ರೇಷ್ಮೆಗೂಡನ್ನು ರೈತರು ತೆಗೆದುಕೊಂಡು ಹೋಗದಿರುವುದರಿಂದ ಮಾರುಕಟ್ಟೆ ಇತಿಹಾಸದ ಪಳೆಯುಳಿಕೆ ಆಗುವ ಸ್ಥಿತಿ ತಲುಪಿದೆ.
ಪ್ರಸ್ತುತ ಗಂಗಾಧರ್ ಎನ್ನುವವರು ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಚಿಂತಾಮಣಿ ರೇಷ್ಮೆ ಬಿತ್ತನೆ ಕೋಟಿಯ ಸಹಾಯಕ ನಿರ್ದೇಶಕ ರಾಮ್ ಕುಮಾರ್ ಅವರಿಗೆ ಮಾರುಕಟ್ಟೆಯ ಪ್ರಭಾರ ವಹಿಸಲಾಗಿದೆ. ಅವರು ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಮನವಿ ಮಾಡುತ್ತಿದ್ದರೂ ನಿರೀಕ್ಷಿತ ಸ್ಪಂದನೆ ದೊರಕುತ್ತಿಲ್ಲವೆಂದು ತಿಳಿದುಬಂದಿದೆ.
ಉದ್ದಿಮೆ ಅಭಿವೃದ್ಧಿಗೆ ಯೋಜನೆ ರೂಪಿಸಿ
ಶಿಡ್ಲಘಟ್ಟದ ಸಮೀಪದಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆ ಆಗುತ್ತಿರುವುದರಿಂದ ಎಚ್.ಕ್ರಾಸ್‌ನಲ್ಲಿರುವ ಮಾರುಕಟ್ಟೆಗೆ ರೈತರು ಹೋಗುವುದಿಲ್ಲ. ಹಾಗೆಂದು ಆ ಸ್ಥಳ ಮತ್ತು ಕಟ್ಟಡವನ್ನು ಪಾಳುಬಿಡದೆ ರೇಷ್ಮೆ ಇಲಾಖೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸಬೇಕು. ಸರ್ಕಾರಿ ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರಗಳು ಮತ್ತು ಹುರಿ ಮಾಡುವ ಘಟಕಗಳನ್ನು ನಿರ್ಮಿಸಬಹುದು. ರೀಲರುಗಳ ಬಹು ಬೇಡಿಕೆಯ ಕಚ್ಚಾ ರೇಷ್ಮೆ ಮಾರಾಟ ಮಾಡುವ ಮಾರುಕಟ್ಟೆ ಸ್ಥಾಪಿಸಬೇಕು. ಸಾಧ್ಯವಾದರೆ ಮಗ್ಗಗಳನ್ನೂ ಸ್ಥಾಪಿಸಬಹುದು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನಟ್ಟ ನಡುವೆ ಇರುವ ಎಚ್.ಕ್ರಾಸ್‌ನಲ್ಲಿ ರೇಷ್ಮೆ ಉದ್ದಿಮೆ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ರೂಪಿಸಬಹುದಾಗಿದೆ. ಎಚ್.ಜಿ.ಗೋಪಾಲಗೌಡ ರೇಷ್ಮೆ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.