ADVERTISEMENT

ಚಿಂತಾಮಣಿ: ವಿದ್ಯಾರ್ಥಿ ಜೊತೆ ಅಸಭ್ಯ ವರ್ತನೆ, ಪ್ರಭಾರ ಮುಖ್ಯ ಶಿಕ್ಷಕಿ ಅಮಾನತು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 10:18 IST
Last Updated 29 ಡಿಸೆಂಬರ್ 2023, 10:18 IST
   

ಚಿಂತಾಮಣಿ: ಪ್ರವಾಸದ ವೇಳೆ ವಿದ್ಯಾರ್ಥಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ತಾಲ್ಲೂಕಿನ ಗ್ರಾಮವೊಂದರ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. 

ಶಿಕ್ಷಕರ ನಡವಳಿಕೆಗೆ, ಶೈಕ್ಷಣಿಕ ಪ್ರವಾಸದ ಉದ್ದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಪ್ರಭಾರ ಮುಖ್ಯ ಶಿಕ್ಷಕರಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಉತ್ತಮ ಚಾರಿತ್ರ್ಯ ರೂಪಿಸುವ ಜವಾಬ್ದಾರಿ ಇದೆ. ಅದನ್ನು ಮರೆತು ವರ್ತಿಸಿದ್ದಾರೆ. ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜನೇಯಪ್ಪ ಗುರುವಾರ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.  

ಶಾಲೆಯಿಂದ ಈಚೆಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಲಾಗಿತ್ತು. ಪ್ರವಾಸದಲ್ಲಿ 10ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿ ಮುತ್ತಿಡುತ್ತಿರುವುದು, ಕೈಯಲ್ಲಿ ಹೂ ಹಿಡಿದು ವಿದ್ಯಾರ್ಥಿಯನ್ನು ಬರ ಸೆಳೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದಕ್ಕೆ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಶಾಲೆ ಮತ್ತು ಗ್ರಾಮದ ಮರ್ಯಾದೆ ಹಾಳಾಗಿದೆ. ಅವರನ್ನು ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದರು. 

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಬುಧವಾರ ಶಾಲೆಗೆ ಭೇಟಿ ನೀಡಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು ಮತ್ತು ವಿದ್ಯಾರ್ಥಿ‌ಗಳಿಗೆ ಮಾಹಿತಿ ಪಡೆದು ಉಪನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು.

‘ಪ್ರವಾಸದ ಸಮಯದಲ್ಲಿ ತೋಟದಲ್ಲಿ ಚಿತ್ರಗಳನ್ನು ತೆಗೆಯಲಾಗುತ್ತಿತ್ತು. ಮನರಂಜನೆಗಾಗಿ ಮಕ್ಕಳಿಂದ ಹಾಡು ಹೇಳಿಸಲಾಗುತ್ತಿತ್ತು. ಆಗ ವಿದ್ಯಾರ್ಥಿಗಳ ಕೆನ್ನೆಗೆ ಮುತ್ತು ನೀಡಲಾಗಿತ್ತು. ಮಕ್ಕಳೊಂದಿಗೆ ಕೆಟ್ಟ ಉದ್ದೇಶದಿಂದ ನಡೆದುಕೊಂಡಿಲ್ಲ. ಕೆಟ್ಟ ಉದ್ದೇಶದಿಂದ ವರ್ತಿಸಿಲ್ಲ’ ಎಂದು ಶಿಕ್ಷಕಿ ಸಮಜಾಯಿಷಿ ನೀಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.