
ಶಿಡ್ಲಘಟ್ಟ: ದ್ವಿಚಕ್ರ ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾಯಿತು.
ನಗರ ಠಾಣೆ ಎಸ್ಐ ವೇಣುಗೋಪಾಲ್ ಮಾತನಾಡಿ, ‘ಜಿಲ್ಲೆಯಲ್ಲಿ ಹೆಲ್ಮೆಟ್ ಧರಿಸುವುದನ್ನು ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ವಾಹನ ಸವಾರರು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಚಾಲನೆ ಪರವಾನಗಿ, ಆರ್.ಸಿ. ಪುಸ್ತಕ, ವಿಮೆ ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಾನೂನಿನ ಭಯಕ್ಕಷ್ಟೇ ಅಲ್ಲದೆ, ನಿಮ್ಮ ಬದುಕು ಮತ್ತು ನಿಮ್ಮ ಮೇಲೆ ಅವಲಂಬನೆಯಾಗಿರುವ ಕುಟುಂಬ ಸದಸ್ಯರ ಹಿತದೃಷ್ಟಿಯಿಂದಲೂ ಹೆಲ್ಮೆಟ್ ಧರಿಸುವುದು ಒಳಿತು ಎಂದು ಹೇಳಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆ, ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಕುರಿತು ಜಾಗೃತಿ ಮೂಡಿಸಿ ಹೆಲ್ಮೆಟ್ ಧರಿಸುವುದರಿಂದ ಆಗುವ ಉಪಯೋಗಗಳ ಕುರಿತು ಮನವರಿಕೆ ಮಾಡಿದರು.
ಆಟೊ ಚಾಲಕರಿಗೆ ಸಮವಸ್ತ್ರ ಧರಿಸಿ ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಬೇಕು. ಪ್ರಯಾಣಿಕರೊಂದಿಗೆ ಸೌಜನ್ಯವಾಗಿ ವರ್ತಿಸಬೇಕು ಎಂದು ತಾಕೀತು ಮಾಡಿದರು. ನಗರಠಾಣೆ ಸಿಬ್ಬಂದಿ ಹಾಜರಿದ್ದರು.