ADVERTISEMENT

ಸಂಚಾರ ನಿಯಮ ಉಲ್ಲಂಘನೆ: ಪ್ರಭಾವಿಗಳಿಗೆ ಮಣೆಯಿಲ್ಲ; ಹಿರಿಯರಿಗೆ ಕಿವಿಮಾತು

ಹೆಲ್ಮೆಟ್ ಧರಿಸದವರ ವಿರುದ್ಧ ಕಾರ್ಯಾಚರಣೆ; ಸಂಚಾರ ಠಾಣೆ ಪಿಎಸ್‌ಐ ವಿದ್ಯಾಶ್ರೀ ಕಾರ್ಯಕ್ಕೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:53 IST
Last Updated 14 ಡಿಸೆಂಬರ್ 2025, 6:53 IST
ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಪಿಎಸ್‌ಐ ವಿದ್ಯಾಶ್ರೀ ಹಾಗೂ ಸಿಬ್ಬಂದಿ
ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಪಿಎಸ್‌ಐ ವಿದ್ಯಾಶ್ರೀ ಹಾಗೂ ಸಿಬ್ಬಂದಿ   

ಚಿಕ್ಕಬಳ್ಳಾಪುರ: ‘ಆಸ್ಪತ್ರೆಗೆ ಬಂದಿದ್ದೆವು ಮೇಡಂ. ನನ್ನ ಬಳಿ ಇರುವುದು ಇಷ್ಟೇ’– ಹಳೇ ಬೈಕ್‌ನೊಂದಿಗೆ ಬಜಾರ್ ರಸ್ತೆಯಲ್ಲಿ ಬಂದ ಆ ವ್ಯಕ್ತಿ ₹ 100ರ ಒಂದು ಮತ್ತು ₹ 200ರ ಒಂದು ನೋಟು ಹಿಡಿದು ಕೈ ಮುಗಿದರು. ಆಗ ಆ ಪಿಎಸ್‌ಐ ‘ನೀವು ದಂಡ ಕಟ್ಟುವುದು ಬೇಡ. ಇದೇ ಹಣದಲ್ಲಿ ಹೆಲ್ಮೆಟ್ ತನ್ನಿ. ಬೈಕ್ ತೆಗೆದುಕೊಂಡು ಹೋಗಿ’ ಎಂದರು.

‘ನೀವೇ ಈ ರೀತಿಯಲ್ಲಿ ಮಾಡಿದರೆ ಹೇಗೆ? ಹೆಲ್ಮೆಟ್ ಇಲ್ಲ ದಂಡ ಪಾವತಿಸಿ. ಹೆಚ್ಚು ಮಾತು ಬೇಡ’–ಹೀಗೆ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಸೇರಿದಂತೆ ರಾಜಕೀಯ ಮುಖಂಡರಿಗೆ, ಪ್ರಭಾವಿಗಳಿಗೆ ಖಡಕ್ಕಾಗಿ ನಿರ್ದೇಶನ ನೀಡಿದವರೂ ಇದೇ ಮಹಿಳಾ ಪಿಎಸ್‌ಐ. 

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಶುಕ್ರವಾರದಿಂದ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯದ ಆದೇಶ ಜಾರಿಯಾಗಿದೆ. ಈ ಕಾರಣದಿಂದ ಪೊಲೀಸರು ರಸ್ತೆಗಳು, ಗಲ್ಲಿ ಗಲ್ಲಿಗಳಲ್ಲಿಯೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. 

ADVERTISEMENT

ಈ ಕಾರ್ಯಾಚರಣೆಯಲ್ಲಿ ನಾಗರಿಕರ ಗಮನ ಸೆಳೆಯುತ್ತಿರುವುದು ಚಿಕ್ಕಬಳ್ಳಾಪುರ ಸಂಚಾರ ಠಾಣೆ ಪಿಎಸ್‌ಐ ವಿದ್ಯಾಶ್ರೀ ಕುಮಾರಸ್ವಾಮಿ ಅವರ ನಡೆ. ಒಂದೆಡೆ ಹೆಲ್ಮೆಟ್ ಧರಿಸದೆ ಬರುವ ಹಿರಿಯ ನಾಗರಿಕರಿಗೆ, ರೈತರಿಗೆ ಕಿವಿಮಾತು ಹೇಳುತ್ತ ಹೆಲ್ಮೆಟ್ ಖರೀದಿಸುವಂತೆ ಮಾಡುತ್ತಿದ್ದಾರೆ. ಹೆಲ್ಮೆಟ್ ಖರೀದಿ ಮಾಡಿಕೊಂಡು ಬಂದು ಬೈಕ್ ತೆಗೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ‘ಪ್ರಭಾವಿ’ಗಳಿಗೆ, ಜಗಳಕ್ಕೆ ನಿಲ್ಲುವವರಿಗೆ ಮಣೆ ಹಾಕುತ್ತಿಲ್ಲ. 

ಪತ್ರಕರ್ತರು, ರಾಜಕೀಯ ನಾಯಕರು, ವಕೀಲರು ಸೇರಿದಂತೆ ಹೆಲ್ಮೆಟ್ ಧರಿಸದ ಎಲ್ಲರ ಮೇಲೂ ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದು ಚಿಕ್ಕಬಳ್ಳಾಪುರದ ಪ್ರಜ್ಞಾವಂತ ನಾಗರಿಕರ ವಲಯದಲ್ಲಿ ಮೆಚ್ಚುಗೆಗೂ ಕಾರಣವಾಗಿದೆ. ನಡುರಸ್ತೆಯಲ್ಲಿಯೇ ನಿಂತು ಹೆಲ್ಮೆಟ್ ಧರಿಸದವರನ್ನು ಹಿಡಿಯುತ್ತಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೇ ಅವರು ಚಿಕ್ಕಬಳ್ಳಾಪುರ ಸಂಚಾರ ಠಾಣೆ ಪಿಎಸ್‌ಐಯಾಗಿ ಜವಾಬ್ದಾರಿ ಸ್ವೀಕರಿಸಿದ್ದಾರೆ.

ಮಹಿಳಾ ಅಧಿಕಾರಿಯ ಮೇಲೆ ‘ಪ್ರಭಾವಿ’ಗಳು ಒತ್ತಡ ಹೇರಿದರೂ ಜಗ್ಗುತ್ತಿಲ್ಲ. ‘ಹೆಲ್ಮೆಟ್ ಧರಿಸಿ ಇಲ್ಲ ದಂಡ ಕಟ್ಟಿ’ ಎನ್ನುವುದಷ್ಟೇ ಅವರ ಮಾತು. ರೈತರು,  ವೃದ್ಧರು ಹೆವಿಡ್ಯೂಟಿ ಸೇರಿದಂತೆ ಸಣ್ಣ ಪುಟ್ಟ ವಾಹನಗಳಲ್ಲಿ ಹೆಲ್ಮೆಟ್ ಧರಿಸದೆ ಬಂದರೆ, ‘ದಂಡಕಟ್ಟಿ’ ಎನ್ನುವ ಮಾತಿಗಿಂತ ‘ಹೆಲ್ಮೆಟ್ ತಂದು ಬೈಕ್ ಕೊಂಡೊಯ್ಯಿರಿ’ ಎಂದು ಕಿವಿಮಾತು ಹೇಳುತ್ತಿದ್ದಾರೆ. 

800ರಿಂದ 1 ಸಾವಿರ ಜೊತೆ ಮಾತುಕತೆ

ಹೆಲ್ಮೆಟ್ ಕಾರ್ಯಾಚರಣೆಯ ವೇಳೆ ಶುಕ್ರವಾರ ಮತ್ತು ಶನಿವಾರ ಅಂದಾಜು 800ರಿಂದ 1ಸಾವಿರ ಜನರ ಜೊತೆ ಮಾತುಕತೆ ನಡೆಸಿದ್ದೇನೆ. ಜನರು ಹೆಲ್ಮೆಟ್ ಧರಿಸಿ ಓಡಾಡುವುದನ್ನು ನೋಡಿದರೆ ನಮಗೆ ಖುಷಿ ಆಗುತ್ತದೆ. ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಹೆಚ್ಚು ಜನರು ಹೆಲ್ಮೆಟ್ ಧರಿಸಿದ್ದಾರೆ. ಬಹಳಷ್ಟು ಜನರು ಹೆಲ್ಮೆಟ್ ಧರಿಸುವ ಬಗ್ಗೆ ಸ್ಪಂದಿಸಿದ್ದಾರೆ ಎನ್ನುತ್ತಾರೆ ವಿದ್ಯಾಶ್ರೀ. 

‘ಜನರು ಹೆಲ್ಮೆಟ್ ಧರಿಸಿದರೆ ನಮಗೂ ಖುಷಿ’

‘ಹೆಲ್ಮೆಟ್ ಧರಿಸದ ರಾಜಕೀಯ ನಾಯಕರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅವರನ್ನು ಕೈಬಿಟ್ಟರೆ ಜನರು ನಮ್ಮ ಮೇಲೆ ತಪ್ಪು ಅಭಿಪ್ರಾಯ ಹೊಂದುವರು. ರಾಜಕೀಯ ನಾಯಕರು ಹೆಲ್ಮೆಟ್ ಧರಿಸಿದರೆ ಸಾರ್ವಜನಿಕರು ಅವರನ್ನು ಅನುಕರಿಸುವ ಸಾಧ್ಯತೆ ಇದೆ. ಇಲ್ಲದಿದ್ದರೆ ಅವರೇ ಧರಿಸಿಲ್ಲ ನಮಗೆ ಹೇಳುವಿರಾ ಎನ್ನುವ ಪ್ರಶ್ನೆಗಳು ಸಹ ಸಾರ್ವಜನಿಕರಿಂದ ಎದುರಾಗುತ್ತವೆ ಎಂದು ಪಿಎಸ್‌ಐ ವಿದ್ಯಾಶ್ರೀ ತಿಳಿಸುವರು.

ರಾಜಕೀಯ ನಾಯಕರು ಪ್ರಭಾವಿಗಳು ಹೆಲ್ಮೆಟ್ ಧರಿಸದಿದ್ದರೆ ಅವರಿಗೆ ತಿಳಿವಳಿಕೆ ಹೇಳಿ ದಂಡ ಕಟ್ಟಿಸುತ್ತಿದ್ದೇನೆ. ನನ್ನ ಕೆಲಸದ ಬಗ್ಗೆ ತೃಪ್ತಿ ಮತ್ತು ಖುಷಿ ಇದೆ. ಸಂಚಾರ ಠಾಣೆಯಲ್ಲಿ ಕೆಲಸ ಮಾಡಬೇಕು ಎಂದು ಕೇಳಿಕೊಂಡೇ ಬಂದಿದ್ದೇನೆ ಎಂದರು. ಕೆಲವು ವೇಳೆ ಜನರ ಬಳಿ ಹಣ ಇಲ್ಲದಿದ್ದಾಗ ಮತ್ತು ಅವರು ಒತ್ತಡದಲ್ಲಿ ಇದ್ದಾಗ ನಮ್ಮ ಮೇಲೆ ಜಗಳ ಮಾಡುವರು. ಇದನ್ನು ಅರಿತು ನಾವು ಅವರ ಜೊತೆ ಸಂವಹನ ನಡೆಸಬೇಕಾಗುತ್ತದೆ. ಅಂತಿಮವಾಗಿ ಜನರು ಹೆಲ್ಮೆಟ್ ಧರಿಸುವುದನ್ನು ನೋಡುವುದು ನಮಗೂ ಖುಷಿ ಎಂದು ಹೇಳಿದರು.

ಶನಿವಾರ ₹ 6 ಲಕ್ಷ ದಂಡ ವಸೂಲಿ

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕೆ ಸಂಬಂಧಿಸಿದಂತೆ ಶನಿವಾರ ಜಿಲ್ಲೆಯಲ್ಲಿ 1202 ಪ್ರಕರಣಗಳು ದಾಖಲಾಗಿವೆ. ₹ 599800 ದಂಡ ವಸೂಲಿ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.