
ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಶುಕ್ರವಾರದಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸಾರ್ವಜನಿಕರಿಗೆ ಪೊಲೀಸರು ದಂಡ ವಿಧಿಸಿದರು.
ಹೆಲ್ಮೆಟ್ ಧರಿಸದಿರುವುದಕ್ಕೆ ದಂಡ ವಿಧಿಸುತ್ತಿದ್ದಾರೆ ಎನ್ನುವುದು ವಾಹನ ಸವಾರರಿಗೆ ತಿಳಿದ ತಕ್ಷಣ ನಗರದ ಸಣ್ಣ ಪುಟ್ಟ ಗಲ್ಲಿಗಳಲ್ಲಿ ಸಾಗಿದರು. ಆದರೆ ಪೊಲೀಸರು ಈ ಗಲ್ಲಿಗಳಲ್ಲಿಯೂ ಕಾರ್ಯಾಚರಣೆ ನಡೆಸಿದರು.
ವಿಶೇಷ ಎಂದರೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ‘ನಾನು ಪೊಲೀಸ್’ ಎಂದ ಸಿಬ್ಬಂದಿಗೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡು ರಸ್ತೆಯಲ್ಲಿಯೇ ಶಿಕ್ಷೆ ವಿಧಿಸಿದರು. ಈ ಸಿಬ್ಬಂದಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಸಂಚಾರ ಠಾಣೆಯಲ್ಲಿಯೇ ಕೆಲಸ ನಿರ್ವಹಿಸಿದ್ದರು.
ಸಿಬ್ಬಂದಿಯೊಬ್ಬರು ಹೆಲ್ಮೆಟ್ ಧರಿಸದೆ ಸಾಮಾನ್ಯ ಬಟ್ಟೆ ತೊಟ್ಟು ಬೈಕ್‌ನಲ್ಲಿ ಬಿಬಿ ರಸ್ತೆಯಲ್ಲಿ ಬಂದರು. ಆಗ ಬಿಬಿ ರಸ್ತೆಯಲ್ಲಿ ಖುದ್ದು ಕಾರ್ಯಾಚರಣೆಗೆ ಇಳಿದಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಕಣ್ಣಿಗೆ ಬಿದ್ದರು.
ಹೆಲ್ಮೆಟ್ ಏಕೆ ಧರಿಸಿಲ್ಲ ಎಂದು ಎಸ್‌ಪಿ ಪ್ರಶ್ನಿಸಿದರು. ‘ಸರ್ ನಾನು ಪೊಲೀಸ್’ ಎಂದು ಸಿಬ್ಬಂದಿ ಉತ್ತರಿಸಿದರು. ‘ನೀನು ಪೊಲೀಸ್ ಆದರೆ ನನಗೇನು ಮೊದಲು ದಂಡ ಕಟ್ಟು ತೆರಳು’ ಎಂದರು.
‘ನೀನು ಪೋಲಿಸ್ ಆದರೂ ಸಹ ಹೆಲ್ಮೆಟ್ ಧರಿಸಬೇಕು ಎನ್ನುವುದು ಗೊತ್ತಾಗುವುದಿಲ್ಲವೇ? ದಂಡ ಕಟ್ಟು. ನಾನು ಹೇಳುವವರೆಗೂ ರಸ್ತೆಯ ನಡುವೆ ನಿಂತು ಯಾರು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನಗಳನ್ನು ಚಲಾಯಿಸಿಕೊಂಡು ಬರುವರೊ ಅವರನ್ನು ತಡೆ’ ಎಂದು ಶಿಕ್ಷೆ ಸಹ ನೀಡಿದರು.
ಸರ್.ಎಂ.ವಿಶ್ವೇಶ್ವರಯ್ಯ ವೃತ್ತ, ಶಿಡ್ಲಘಟ್ಟ ವೃತ್ತ, ಎಂ.ಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಯ ಎಲ್ಲೆಡೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಡಿವೈಎಸ್‌ಪಿ ಶಿವಕುಮಾರ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು.
ಹೆಲ್ಮೆಟ್ ಧರಿಸದ ಕೆಲವರನ್ನು ಎಸ್‌ಪಿ ತಡೆದಾಗ ಅವರು ಎಸ್‌ಪಿ ಅವರ ಜೊತೆಯೇ ವಾಗ್ವಾದ ನಡೆಸಿದರು. ಆಗ ಎಸ್‌ಪಿ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಸುಮ್ಮನಾದರು. ದಂಡ ಪಾವತಿಸಿದರು.
ಹೆಲ್ಮೆಟ್ ಧರಿಸದವರು ಗಲ್ಲಿ ರಸ್ತೆಗಳಲ್ಲಿ ಸಾಗುತ್ತಿದ್ದಾರೆ ಎನ್ನುವುದು ಕಂಡೊಡನೆ ಆ ರಸ್ತೆಗಳಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸಿದರು. ‘ಸರ್, ನಾನು ಆಸ್ಪತ್ರೆಗೆ ಬಂದಿದ್ದೆ’, ‘ಹೆಲ್ಮೆಟ್ ಮನೆಯಲ್ಲಿದೆ’ ಹೀಗೆ ನಾನಾ ಸಬೂಬು ಹೇಳಿದರೂ ಅಧಿಕಾರಿಗಳು ದಂಡ ವಿಧಿಸಿದರು. ಇನ್ನು ಮುಂದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚಿಸಿದರು.
ಬಜಾರ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೆಲ್ಮೆಟ್ ಧರಿಸದೆ ಬಂದರು. ಮಹಿಳಾ ಅಧಿಕಾರಿ ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ‘ಆಸ್ಪತ್ರೆಗೆ ಬಂದಿದ್ದೇನೆ. ದಂಡಕಟ್ಟುವಷ್ಟು ಹಣವಿಲ್ಲ’ ಎಂದು ₹ 300 ಕೈಯಲ್ಲಿಡಿದು ಬೇಡಿಕೊಂಡರು. ಆಗ ಮಹಿಳಾ ಅಧಿಕಾರಿ, ‘ನಿಮ್ಮಿಂದ ದಂಡವನ್ನು ಪಡೆಯುವುದಿಲ್ಲ. ಆದರೆ ನೀವು ಈಗಲೇ ಹೆಲ್ಮೆಟ್ ತೆಗೆದುಕೊಂಡು ಬಂದು ಬೈಕ್ ತೆಗೆದುಕೊಂಡು ಹೋಗಿ. ನಿಮ್ಮ ರಕ್ಷಣೆಗಾಗಿ ನಾನು ಈ ಮಾತು ಹೇಳುತ್ತಿರುವುದು’ ಎಂದು ಮನವರಿಕೆ ಮಾಡಿಕೊಟ್ಟರು.
ಹೆಲ್ಮೆಟ್ ಧರಿಸದೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕೆಲವರು ನಾವು ರಾಜಕೀಯ ನಾಯಕರು ಎಂದು ಪ್ರಭಾವಗಳನ್ನು ಬೀರಲು ಸಹ ಮುಂದಾದರು. ಆದರೆ ಇದ್ಯಾವುದಕ್ಕೂ ಮಣಿಯದ ಅಧಿಕಾರಿಗಳು ದಂಡವನ್ನು ಪಾವತಿಸಿ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಸ್ಪಂದನೆಯೂ ಉತ್ತಮ: ಸಾಮಾನ್ಯವಾಗಿ ಚಿಕ್ಕಬಳ್ಳಾಪುರದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಸಾಗುವುದು ಹೆಚ್ಚು ಕಂಡು ಬರುತ್ತಿತ್ತು. ಆದರೆ ಕಡ್ಡಾಯದ ಆದೇಶ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು.
ಹೀಗೆ ಜಿಲ್ಲೆಯಾದ್ಯಂತ ಹೆಲ್ಮೆಟ್ ಕಡ್ಡಾಯದ ಮೊದಲ ದಿನವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದರು.
ಜಾಗೃತಿ ಜಾಥಾ
ಬೆಳ್ಳಿಗ್ಗೆ ನಗರದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲು ಬೈಕ್ ಜಾಥಾ ನಡೆಸಿದರು. ನಗರದ ಬಿಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.