
ಚಿಕ್ಕಬಳ್ಳಾಪುರ: ಎಚ್‌ಐವಿ ಸೋಂಕು ಹಾಗೂ ಏಡ್ಸ್ ಕಾಯಿಲೆ ತಡೆಗಟ್ಟಲು ಜನಸಾಮಾನ್ಯರಲ್ಲಿ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ ಪಿ.ರಾಮಲಿಂಗೇಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್, ಆರೋಗ್ಯ ಇಲಾಖೆ, ನಂದಿ ವೈದ್ಯಕೀಯ ವಿದ್ಯಾಲಯ ಹಾಗೂ ವಿವಿಧ ಸಂಸ್ಥೆಗಳು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯವೇ ಭಾಗ್ಯ. ಆರೋಗ್ಯವಿದ್ದರೆ ಏನನ್ನಾದರೂ ಸಾಧಿಸಬಹುದು. ಸಮಾಜದಲ್ಲಿ ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದು ಆಡಳಿತಾಂಗದ ಮುಖ್ಯ ಕೆಲಸ ಎಂದರು.
‘ಎಚ್.ಐ.ವಿ ಸೋಂಕು ಹಾಗೂ ಏಡ್ಸ್ ಹರಡುವಿಕೆ ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸುವುದು’ ಈ ವರ್ಷದ ಏಡ್ಸ್ ದಿನದ ಘೋಷವಾಕ್ಯವಾಗಿದೆ. ಅಡೆತಡೆಗಳನ್ನು ನಿಯಂತ್ರಿಸಲು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಬಹಳ ಅಗತ್ಯ. ಒಳ್ಳೆಯ ಆರೋಗ್ಯ ಹೊಂದಿರಬೇಕು ಎಂದರೆ ಕೆಟ್ಟ ಹವ್ಯಾಸಗಳನ್ನು ತೊರೆಯಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್ ಮಾತನಾಡಿ, ಏಡ್ಸ್ ಪ್ರಕರಣಗಳು ಬಾಗೇಪಲ್ಲಿ, ಗೌರಿಬಿದನೂರು ಮತ್ತು ಚಿಂತಾಮಣಿ ತಾಲ್ಲೂಕಿನ ಗಡಿಭಾಗದಲ್ಲಿ ದಾಖಲಾಗಿವೆ.
ಏಡ್ಸ್ ಅಸುರಕ್ಷಿತ ಲೈಂಗಿಕ ಕ್ರಿಯೆ ಮೂಲಕ ಹೆಚ್ಚಾಗಿ ಹರಡುತ್ತದೆ. ಸೋಂಕಿತ ಗರ್ಭಿಣಿಯರಿಂದ ಶಿಶುಗಳಿಗೂ ಹರಡುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆ, ಒಬ್ಬರು ಬಳಸಿದ ಸೂಜಿ, ಕತ್ತರಿಯನ್ನು ಇನ್ನೊಬ್ಬರು ಬಳಸಿದಾಗ, ಸ್ತನ್ಯಪಾನ ಮುಂತಾದ ಕಾರಣಗಳಿಂದ ಏಡ್ಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪಾ ‘ಎಚ್.ಐ.ವಿ ಏಡ್ಸ್ ಹರಡುವಿಕೆ ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ’ ಎಂಬ ಪ್ರತಿಜ್ಞಾ ವಿಧಿ ಬೋಧಿಸಿದರು. ಏಡ್ಸ್ ವಿರುದ್ಧ ಜಾಗೃತಿ ಮೂಡಿಸಿದವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಡಿ.ಟಿ ಉಮಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಎಚ್‌ಐವಿ; 2314 ಮಂದಿ ಸಾವು
ಜಿಲ್ಲೆಯಲ್ಲಿ 2025ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 223 ಎಚ್.ಐ.ವಿ ಸೊಂಕಿತ ಪ್ರಕರಣಗಳು ದಾಖಲಾಗಿವೆ. 2009ರಿಂದ 2025 ಅಕ್ಟೋಬರ್ ಅಂತ್ಯದವರೆಗೂ 7603 ಮಂದಿ ಎಚ್‌ಐವಿ ಸೋಂಕಿತರು ಪತ್ತೆ ಆಗಿದ್ದಾರೆ ಎಂದು ಡಾ.ಮಹೇಶ್ ಕುಮಾರ್ ತಿಳಿಸಿದರು. 3627 ಮಂದಿ ಪ್ರಸ್ತುತವೂ ಚಿಕಿತ್ಸೆ ಪಡೆಯುತ್ತಿದ್ದಾರೆ. 2314 ಮಂದಿ ಮರಣ ಹೊಂದಿದ್ದಾರೆ. 689 ರೋಗಿಗಳು ಹೊರ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 18 ರಿಂದ 45ರ ವಯಸ್ಕರಲ್ಲಿ ಹೆಚ್ಚು ಎಚ್‌ಐವಿ ಸೋಂಕು ದೃಢಪಟ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಎಚ್‌ಐವಿ ರೋಗಿಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.