ADVERTISEMENT

ಬಾಗೇಪಲ್ಲಿ: ಬಿಸಿಲ ದಾಹ ತೀರಿಸಲು ತಂಪುಪಾನೀಯಕ್ಕೆ ಮೊರೆ

ಹೆಚ್ಚಿದ ಹಣ್ಣಿನ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 13:51 IST
Last Updated 6 ಏಪ್ರಿಲ್ 2024, 13:51 IST
ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿ ಬೀದಿಬದಿಯಲ್ಲಿ ನಿಂಬೆ ಹಣ್ಣಿನ ರಸ ಹಾಗೂ ಹಣ್ಣುಗಳ ಸಲಾಡ್ ಸೇವಿಸಲು ಜನರು ಸಾಲುಗಟ್ಟಿ ನಿಂತಿರುವುದು
ಬಾಗೇಪಲ್ಲಿ ಮುಖ್ಯರಸ್ತೆಯಲ್ಲಿ ಬೀದಿಬದಿಯಲ್ಲಿ ನಿಂಬೆ ಹಣ್ಣಿನ ರಸ ಹಾಗೂ ಹಣ್ಣುಗಳ ಸಲಾಡ್ ಸೇವಿಸಲು ಜನರು ಸಾಲುಗಟ್ಟಿ ನಿಂತಿರುವುದು   

ಬಾಗೇಪಲ್ಲಿ: ಪಟ್ಟಣದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಬಿಸಿಲಿನ ತಾಪಮಾನ 39 ಡಿಗ್ರಿ ಸೆಲ್ಸಿಯಷ್‌ನಷ್ಟು ಏರಿಕೆ ಕಂಡಿದೆ. ಜನರು ದಾಹ ತೀರಿಸಿಕೊಳ್ಳಲು ಮಜ್ಜಿಗೆ, ಕಬ್ಬಿನ ರಸ, ಎಳನೀರು, ನಿಂಬೆಹಣ್ಣಿನ ರಸ, ಹಣ್ಣಿನ ಸಲಾಡ್, ಕಲ್ಲಂಗಡಿ ಹಣ್ಣು ಸೇರಿದಂತೆ ತಂಪು ಪಾನೀಯಗಳಿಗೆ ಮೊರೆ ಹೋಗಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ಬಿಸಿಲಿನ ತಾಪ ಹೆಚ್ಚಾಗಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನ ಹಾಗೂ ಜನರ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುವಂತೆ ಆಗಿದೆ.

ಪಟ್ಟಣದ ಮುಖ್ಯರಸ್ತೆಯಲ್ಲಿನ ಉರ್ದು ಶಾಲೆಯ ಪಕ್ಕದಲ್ಲಿ ಅಂಗಡಿ ಮುಂದೆ ನಿಂಬೆ ಹಣ್ಣಿನ ರಸ, ಹಣ್ಣಿನ ಸಲಾಡ್, ತಂಪುಪಾನೀಯಗಳ ಮಾರಾಟ ಹೆಚ್ಚಾಗಿದೆ. ನಿಂಬೆಹಣ್ಣಿನ ರಸ ಒಂದು ಲೋಟಕ್ಕೆ ₹10ಕ್ಕೆ, ಹಣ್ಣುಗಳ ಸಲಾಡ್ ₹20ಕ್ಕೆ ಮಾರಾಟವಾಗುತ್ತಿದೆ. ಹಣ್ಣಿನ ರಸಕ್ಕೆ ಬೇಡಿಕೆ ಈ ವರ್ಷ ಹೆಚ್ಚಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು.

ADVERTISEMENT

ಪಟ್ಟಣದ ಮುಖ್ಯರಸ್ತೆಯಲ್ಲಿ ಹಾಗೂ ಹೊರವಲಯದ ಗೂಳೂರು ರಸ್ತೆ, ಬೈಪಾಸ್ ರಸ್ತೆ, ಟಿ.ಬಿ ಕ್ರಾಸ್, ಕಾರಕೂರು ಕ್ರಾಸ್‌ಗಳಲ್ಲಿ ಕಬ್ಬಿನ ರಸದ ಅಂಗಡಿ, ಎಳನೀರು, ತಂಪು ಪಾನೀಯ ಅಂಗಡಿಗಳು ಇವೆ. ಕುಡಿಯುವ ನೀರಿನ ಅರ್ಧ, ಒಂದು ಲೀಟರ್ ಬಾಟಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಡಾ.ಎಚ್.ಎನ್.ವೃತ್ತದಲ್ಲಿ ಕರ್ಬೂಜ, ಪರಂಗಿ ಹಣ್ಣುಗಳು, ಬಸ್ ನಿಲ್ದಾಣದ ಮುಂದೆ, ಉರ್ದು ಶಾಲೆಯ ಬಳಿಯ ಮರದ ಕೆಳಗೆ, ಬೀದಿ ಬದಿಯಲ್ಲಿ ಮಜ್ಜಿಗೆ, ನಿಂಬೆ ರಸ, ಕಬ್ಬಿನ ಹಾಲು ಸೇರಿದಂತೆ ತಂಪುಪಾನೀಯಗಳ ವ್ಯಾಪಾರ ಹೆಚ್ಚಾಗಿದೆ.

ತಾಪಮಾನ ಹೆಚ್ಚಾಗಿರುವುದರಿಂದ ಅರ್ಧ ಗಂಟೆಗೊಮ್ಮೆ ನೀರು, ತಂಪುಪಾನೀಯ, ಹಣ್ಣು ಸೇವಿಸಿದರೂ ದಾಹ ಕಡಿಮೆ ಆಗುತ್ತಿಲ್ಲ ಎಂದು ಪಟ್ಟಣದ ವ್ಯಾಪಾರಿ ಬಿ.ಎ.ಮುಜಸ್ಸಿಮ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.