
ಚಿಂತಾಮಣಿ: ಗ್ಯಾರಂಟಿಗಳ ಯೋಜನೆಗಳ ನಡುವೆಯೂ ಬಡವರಿಗೆ ಕಳೆದ ವರ್ಷದ ಫೆಬ್ರುವರಿಯಲ್ಲಿ 36,789 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಅದೇ ರೀತಿ ಹುಬ್ಬಳ್ಳಿಯಲ್ಲಿ ಇದೇ 24ರಂದು ಬಡವರಿಗೆ 47,345 ಮನೆಗಳನ್ನು ವಿತರಿಸಲಾಗುವುದು ಎಂದು ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಿಳಿಸಿದರು.
‘ಬಿಜೆಪಿ ನಾಯಕರು ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. 2019ರಿಂದ 2023ರವರೆಗಿನ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿ ಬಡವರಿಗೆ ಒಂದು ಮನೆಯನ್ನು ನೀಡಿರಲಿಲ್ಲ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅವರ ಕಾಲದಲ್ಲಿ ಒಂದು ಮನೆ ಮಂಜೂರು ಮಾಡಿದ್ದರೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ’ ಸವಾಲು ಹಾಕಿದರು.
ಒಂದು ಮನೆ ನಿರ್ಮಾನಕ್ಕೆ ₹7.5 ಲಕ್ಷ ವೆಚ್ಚವಾಗುತ್ತದೆ. ಈ ಪೈಕಿ ರಾಜ್ಯ ಸರ್ಕಾರ ₹1.5 ಲಕ್ಷ ಮತ್ತು ಕೇಂದ್ರ ಸರ್ಕಾರ ₹1.5 ಲಕ್ಷ ನೀಡುತ್ತದೆ. ಉಳಿದ ₹4.5 ಲಕ್ಷವನ್ನು ಫಲಾನುಭವಿಗಳು ಭರಿಸಬೇಕು ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. 2028ರವರೆಗೆ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮಾಡುವುದಿದ್ದರೆ ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಪಾಲಿಸುತ್ತೇವೆ ಎಂದರು.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚುನಾವಣಾ ರಣತಂತ್ರ ರೂಪಿಸುವುದರಲ್ಲಿ ಚಾಣಾಕ್ಷರು. ಹೀಗಾಗಿ ಅವರಿಗೆ ದೇಶದ ಎಲ್ಲ ರಾಜ್ಯಗಳಿಂದ ಪಕ್ಷದ ಸಂಘಟನೆ ಮತ್ತು ಚುನಾವಣೆಗಳ ಉತ್ಸುವಾರಿಗೆ ಬೇಡಿಕೆ ಇದೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಸಚಿವರಿಗೆ ಅದ್ದೂರಿ ಸ್ವಾಗತ ಕೋರಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.