ADVERTISEMENT

ಜಂಗಾಲಪಲ್ಲಿ ಮನೆಯಲ್ಲೇ ಸಿಲಿಂಡರ್ ಅಕ್ರಮ ದಾಸ್ತಾನು: ಭಯದಲ್ಲಿ ಗ್ರಾಮಸ್ಥರು

ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:12 IST
Last Updated 5 ನವೆಂಬರ್ 2025, 7:12 IST
ಮನೆಯೊಂದರ ಬಳಿ ದಾಸ್ತಾನು ಮಾಡಿರುವ ಸಿಲಿಂಡರ್‌ಗಳು
ಮನೆಯೊಂದರ ಬಳಿ ದಾಸ್ತಾನು ಮಾಡಿರುವ ಸಿಲಿಂಡರ್‌ಗಳು   

ಚೇಳೂರು: ತಾಲ್ಲೂಕಿನ ನಾರೇಮದ್ದೆಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಗಾಲಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಅಕ್ರಮವಾಗಿ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳನ್ನು ಬೃಹತ್ ಪ್ರಮಾಣದಲ್ಲಿ ದಾಸ್ತಾನು ಮಾಡಿ ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ.

ಗ್ರಾಮದ ಮಧ್ಯಭಾಗದಲ್ಲಿರುವ ಮನೆಯೊಂದರಲ್ಲಿ ಟ್ರಕ್‌ ಸಮೇತ ಅಸಂಖ್ಯಾತ ಅನಿಲ ಸಿಲಿಂಡರ್‌ಗಳನ್ನು ಅಸುರಕ್ಷಿತವಾಗಿ ಸಂಗ್ರಹಿಸಲಾಗಿದೆ. ಈ ವಿಷಯ ಗೊತ್ತಿದ್ದರೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.  

ಕಬ್ಬಿಣದ ಪಂಜರದಂತಹ ವ್ಯವಸ್ಥೆ ಹೊಂದಿರುವ ಒಂದು ವಾಹನದಲ್ಲಿ ಹತ್ತಾರು ಸಿಲಿಂಡರ್‌ಗಳನ್ನು ಅಸುರಕ್ಷಿತವಾಗಿ ತುಂಬಿದ್ದಾರೆ. ಮನೆಯ ಆವರಣದಲ್ಲಿ ಮತ್ತು ದ್ವಿಚಕ್ರ ವಾಹನಗಳ ಪಕ್ಕದಲ್ಲಿಯೂ ಸಹ ಹೆಚ್ಚುವರಿ ಸಿಲಿಂಡರ್‌ಗಳನ್ನು ರಾಶಿ ಹಾಕಿದ್ದಾರೆ. ರಾತ್ರಿ ವೇಳೆ ಸಿಲಿಂಡರ್‌ಗಳ ಸಾಗಣೆ ಮತ್ತು ದಾಸ್ತಾನು ಚಟುವಟಿಕೆಗಳು ನಡೆಯುತ್ತಿವೆ ಎಂಬುದಕ್ಕೆ ವಿಡಿಯೊಗಳು ಲಭ್ಯವಿದೆ. ಅಕ್ರಮವಾಗಿ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿರುವ ಚಿತ್ರಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ADVERTISEMENT

ಜನನಿಬಿಡ ಪ್ರದೇಶದಲ್ಲಿ ಈ ಪ್ರಮಾಣದ ಅನಿಲ ಸಿಲಿಂಡರ್‌ಗಳ ದಾಸ್ತಾನು ಇರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಅಚಾತುರ್ಯ ಅಥವಾ ಕಿಡಿ ಇಡೀ ಗ್ರಾಮವನ್ನು ಸುಟ್ಟುಹಾಕಬಹುದು. ಮಕ್ಕಳಿರುವ ಮನೆಗಳಿರುವ ಪ್ರದೇಶದಲ್ಲಿ ಈ ರೀತಿಯ ಅಪಾಯಕಾರಿ ಚಟುವಟಿಕೆಗಳಿಗೆ ಹೇಗೆ ಅವಕಾಶ ನೀಡಲಾಗಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ನಿಯಮಾನುಸಾರ, ಯಾವುದೇ ಏಜೆನ್ಸಿಯು ಗ್ರಾಹಕರಿಗೆ ಸೀಮಿತ ಸಂಖ್ಯೆಯ ಸಿಲಿಂಡರ್‌ಗಳನ್ನು ಮಾತ್ರ ನೀಡಬೇಕು. ಆದರೆ ಇಲ್ಲಿ ಅಕ್ರಮ ಮಾರಾಟಕ್ಕೆ ಬೇಕಾಗುವಷ್ಟು ಸಿಲಿಂಡರ್‌ಗಳನ್ನು ಏಜೆನ್ಸಿ ಮಾಲೀಕರು ಹೇಗೆ ಪೂರೈಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಏಜೆನ್ಸಿ ಮಾಲೀಕರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಸಿಲಿಂಡರ್ ತೆರವುಗೊಳಿಸಿ ದೊಡ್ಡ ಅನಾಹುತ ಸಂಭವಿಸುವ ಮೊದಲೇ ಗ್ರಾಮದಲ್ಲಿರುವ ಅಪಾಯಕಾರಿ ಸಿಲಿಂಡರ್‌ಗಳನ್ನು ತೆರವುಗೊಳಿಸಬೇಕು. ಅನಾಹುತ ಸಂಭವಿಸಿದ ನಂತರ ಚರ್ಚಿಸಿದರೆ ಪ್ರಯೋಜನವಿಲ್ಲ.
– ನವೀನ್, ಗ್ರಾಮಸ್ಥ
ಹೆಚ್ಚು ದರ ಗೃಹ ಬಳಕೆ ಸಿಲಿಂಡರ್‌ಗಳನ್ನು ನಿಗದಿತ ದರಕ್ಕಿಂತ ಹೆಚ್ಚುವರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
– ಲಕ್ಷ್ಮೀಪತಿ, ಸ್ಥಳೀಯ ನಿವಾಸಿ

ಆಹಾರ ಇಲಾಖೆ ನಿರ್ಲಕ್ಷ್ಯ: ಆರೋಪ

ಈ ಅಕ್ರಮ ದಾಸ್ತಾನಿನ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಇದುವರೆಗೂ ಯಾವುದೇ ದಾಳಿ ಅಥವಾ ಕಠಿಣ ಕಾನೂನು ಕ್ರಮ ಜರುಗಿಸಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಆಹಾರ ಇಲಾಖೆ ಪೊಲೀಸ್ ಇಲಾಖೆ ಮತ್ತು ತಾಲ್ಲೂಕು ಆಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಈ ಅಕ್ರಮ ಸಿಲಿಂಡರ್ ದಾಸ್ತಾನನ್ನು ವಶಕ್ಕೆ ಪಡೆಯಬೇಕು. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.