ADVERTISEMENT

ಮುನಗನಹಳ್ಳಿ ಕೆರೆಯ ಒಡಲಿಗೆ ಹಗಲಲ್ಲೇ ಕನ್ನ!: ಅಧಿಕಾರಿಗಳ ಜಾಣಕುರುಡು

ಎಂ.ರಾಮಕೃಷ್ಣಪ್ಪ
Published 7 ಜುಲೈ 2025, 5:47 IST
Last Updated 7 ಜುಲೈ 2025, 5:47 IST
ಚಿಂತಾಮಣಿ ತಾಲ್ಲೂಕಿನ ಮುನುಗನಹಳ್ಳಿ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದು
ಚಿಂತಾಮಣಿ ತಾಲ್ಲೂಕಿನ ಮುನುಗನಹಳ್ಳಿ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದು   

ಚಿಂತಾಮಣಿ: ತಾಲ್ಲೂಕಿನ ಕಸಬಾ ಹೋಬಳಿಯ ಮುನಗನಹಳ್ಳಿಯ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಸಾಗಿಸುವ ದಂದೆ ರಾಜಾರೋಷವಾಗಿ ನಡೆಯುತ್ತಿದೆ.

ಇದರಿಂದ ಕೆರೆಯ ಮೂಲ ಸ್ವರೂಪವನ್ನೇ ಹಾಳು ಮಾಡುತ್ತಿದ್ದಾರೆ. ಕೆರೆಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ. ನಗರದ ಹೊರವಲಯದ ಮದನಪಲ್ಲಿ ರಸ್ತೆ ಸಮೀಪವಿರುವ ಮುನಗನಹಳ್ಳಿ ಗ್ರಾಮದ ಕೆರೆ ಹಾಗೂ ಅಂಗಳದ ಅಕ್ಕಪಕ್ಕ ಹಾಡಹಗಲೇ ದಂದೆಕೋರರು ರಾಜಾರೋಷವಾಗಿ ಮಣ್ಣನ್ನು ಟಿಪ್ಪರ್‌ ಮೂಲಕ ಸಾಗಿಸುತ್ತಿದ್ದಾರೆ. ಮಣ್ಣನ್ನು ಯಂತ್ರದಿಂದ ಟಿಪ್ಪರ್‌ಗಳಿಗೆ ತುಂಬಿಕೊಂಡು ಇಟ್ಟಿಗೆ ಫ್ಯಾಕ್ಟರಿಗಳಿಗೆ ಮಾರಾಟ ಮಾಡುವ ದಂದೆ ವ್ಯಾಪಕವಾಗಿ ನಡೆಯುತ್ತಿದೆ.

ಕೆರೆಯಿಂದ ಮಣ್ಣು ತೆಗೆಯಬೇಕಾದರೆ ಗಣಿ ಮತ್ತು ಕಂದಾಯ ಇಲಾಖೆಯ ಅನುಮತಿ ಪಡೆಯಬೇಕಿದೆ. ನಿಗದಿತ ರಾಜಧನ ಪಾವತಿ ಮಾಡಿ ಪರವಾನಗಿ ಪಡೆಯಬೇಕಾಗುತ್ತದೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಶುಲ್ಕವನ್ನು ಪಾವತಿಸದೆ ನಿತ್ಯ ಹತ್ತಾರು ಲೋಡ್‌ಗಳಷ್ಟು ಮಣ್ಣು ಖಾಲಿಯಾಗುತ್ತಿದೆ. ಬಹಿರಂಗವಾಗಿ ಎಲ್ಲರ ಕಣ್ಣು ಮುಂದೆ ಇದು ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಜಾಣ ಕುರುಡುತನ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ADVERTISEMENT

ಸರ್ಕಾರಿ ನಿಯಮಗಳನ್ನು ಪಾಲಿಸದೆ ಯಥೇಚ್ಚವಾಗಿ ಮನಬಂದಂತೆ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದರಿಂದ ಕೆರೆ ಸ್ವರೂಪ ಬದಲಾಗಿ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುವಂತಾಗಿದೆ.

ಕೆರೆ, ಕುಂಟೆ ಸರಿಯಾಗಿ ಇದ್ದರೆ ಮಾತ್ರ ಮಳೆ ನೀರು ಶೇಖರಣೆಯಾಗುತ್ತದೆ. ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಆದರೆ ಕೆಲವು ಜನರು ಹಣದಾಸೆಗೆ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣುಗಣಿಗಾರಿಕೆ ಮಾಡುವ ಮೂಲಕ ಕೆರೆಗಳ ನಾಶಕ್ಕೆ ಮುಂದಾಗಿದ್ದಾರೆ. ರೈತರು ತಮ್ಮ ಹೊಲ, ತೋಟಗಳಿಗೆ ಹೂಳನ್ನು ಟ್ರ್ಯಾಕ್ಟರ್‌ ಮೂಲಕ ಸಾಗಿಸಿಕೊಂಡರೆ ಅಧಿಕಾರಿಗಳು ಹಿಡಿದು ದಂಡ ಹಾಕುತ್ತಾರೆ ಎಂದು ದೂರಿದರು.

ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ನಿತ್ಯಯಂತ್ರದೊಂದಿಗೆ ಮಣ್ಣು ತೆಗೆಯುವ ಕಾಯಕ ಹೆಚ್ಚಾಗುತ್ತಿದೆ. ಒಂದೆಡೆ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಕೆರೆಯಲ್ಲಿನ ಹೂಳು ತೆಗೆಯುತ್ತಿದೆ. ಮತ್ತೊಂದು ಕಡೆ ಕೆಲವರು ಅಕ್ರಮ ಮಣ್ಣುಗಣಿಗಾರಿಕೆಯಿಂದ ಹಣ ಸಂಪಾದಿಸಲು ಕೆರೆಗಳನ್ನು ಹಾಳು ಮಾಡಲು ಹೊರಟಿದ್ದಾರೆ.

ಮಣ್ಣು ತೆಗೆಯುವವರು ವಾರದ ರಜೆ ದಿನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಂದಾಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ರಜೆ ಇದ್ದರೆ ಸ್ಥಳಕ್ಕೆ ಬರುವುದಿಲ್ಲ ಎಂಬ ಮುಂದಾಲೋಚನೆಯಿಂದ ಮಣ್ಣು ಎತ್ತುವುದು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಅಕ್ರಮ ಮಣ್ಣುಗಣಿಗಾರಿಕೆಯಲ್ಲಿ ತೊಡಗಿರುವವರನ್ನು ಸಾರ್ವಜನಿಕರು ತಡೆದು ಮಣ್ಣು ತೆಗೆಯುವವರನ್ನು ಪ್ರಶ್ನಿಸಿದರೆ ‘ನಾವು ಪರವಾನಗಿ ಪಡೆದಿದ್ದೇವೆ’ ಎಂದು ಸಬೂಬು ಹೇಳುವ ಮೂಲಕ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಾರೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರಬೇಕು. ಇಲ್ಲದಿದ್ದರೆ ಹಾಡುಹಗಲಲ್ಲೇ ಮಣ್ಣು ಸಾಗಿಸಲು ಹೇಗೆ ಸಾಧ್ಯ? ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರ ಮೂಲಕ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯಿಸುತ್ತಾರೆ.

ಮಾಧ್ಯಮದವರು ತಾಲ್ಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದ ತಕ್ಷಣ ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು. ಆದರೆ ಅಧಿಕಾರಿಗಳು ಯಂತ್ರ ಮತ್ತು ಟಿಪ್ಪರ್‌ ಹೋದ ಮೇಲೆ ಭೇಟಿ ನೀಡಿದ್ದಾರೆ. ಪರಿಶೀಲಿಸಿಕೊಂಡು ಬರಿಗೈಲಿ ವಾಪಸ್ ಬಂದಿದ್ದಾರೆ.

ಅಕ್ರಮ ಮಣ್ಣು ಸಾಕಾಣಿಕೆಗೆ ಅಧಿಕಾರಿಗಳು ಶಾಮೀಲಾಗಿ ಬೆಂಬಲ ನೀಡುತ್ತಿದ್ದಾರೆ. ಅವರ ಬೆಂಬಲವಿಲ್ಲದಿದ್ದರೆ ಹಾಡುಹಗಲಲ್ಲೇ ಯಂತ್ರ ಮತ್ತು ಟಿಪ್ಪರ್‌ ಬಳಸಿ ಮಣ್ಣು ಸಾಗಿಸಲು ಹೇಗೆ ಸಾಧ್ಯ? ಅಧಿಕಾರಿಗಳು ಮತ್ತು ಮಣ್ಣು ದಂದೆಕೋರರ ನಡುವಿನ ಅನೈತಿಕ ಸಂಬಂಧದಿಂದಲೇ ರಾಜಾರೋಷವಾಗಿ ಮಣ್ಣು ಸಾಗಾಣಿಕೆ ನಡೆಯುತ್ತಿದೆ ಎಂದು ‌ಸ್ಥಳೀಯರು ಆರೋಪಿಸುತ್ತಾರೆ.

ಚಿಂತಾಮಣಿ ತಾಲ್ಲೂಕಿನ ಮುನುಗನಹಳ್ಳಿ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿರುವುದು
ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಸ್ಥಳೀಯ ಪಂಚಾಯಿತಿಗೆ ನೋಟಿಸ್ ನೀಡಲಾಗುವುದು. ಮಣ್ಣು ತೆಗೆಯುವವರಿಂದ ದಂಡ ವಸೂಲಿ ಮಾಡಲಾಗುವುದು
ಸುದರ್ಶನ ಯಾದವ್‌ ಚಿಂತಾಮಣಿ ತಹಶೀಲ್ದಾರ್‌
ಕೆರೆಯಲ್ಲಿ ಮಣ್ಣು ತೆಗೆಯಲು ಪಂಚಾಯಿತಿಯಿಂದ ಯಾವುದೇ ಅನುಮತಿ ಕೊಟ್ಟಿಲ್ಲ. ಅವರಿಗೆ ನೋಟಿಸ್‌ ನೀಡಿ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನುಗನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.