
ಚಿಕ್ಕಬಳ್ಳಾಪುರ: ಸನಾತನ ಸಂಸ್ಕೃತಿಯ ದೀಪ ಮತ್ತೆ ಪ್ರಜ್ವಲವಾಗುತ್ತಿದೆ ಎನ್ನುವುದನ್ನು ಸತ್ಯಸಾಯಿ ಗ್ರಾಮದಲ್ಲಿ ಕಾಣುತ್ತಿದ್ದೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವದ 74ನೇ ದಿನವಾದ ಮಂಗಳವಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಂಸ್ಕೃತಿಕ ದೀಪವು ಬೆಳಗುತ್ತಿರುವ ಕಾರಣದಿಂದಲೇ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಈ ದೇಶದ ಉದ್ದಗಲದಲ್ಲಿ ನಮ್ಮ ಸಾಂಸ್ಕೃತಿಕ ವೈಭವಗಳು ಹಿಂದಿನಂತೆ ಮತ್ತೆ ಮುನ್ನಡೆ ಕಾಣುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ದೇವರಂಥ ಮನುಷ್ಯರು ಇರುತ್ತಾರೆ ಎನ್ನುವುದಕ್ಕೆ ಸದ್ಗುರು ಮಧುಸೂದನ ಸಾಯಿ ಅವರೇ ಸಾಕ್ಷಿ. ಅವರು ಮಾಡುತ್ತಿರುವ ಸೇವೆಗಳು ಕಣ್ಣೆದುರು ಕಾಣುತ್ತಿದೆ ಎಂದರು.
ಸನಾತನ ಧರ್ಮದಲ್ಲಿ ಅನ್ನ, ಅಕ್ಷರ, ಆರೋಗ್ಯ ಈ ಮೂರು ದಾನ ಮತ್ತು ಸೇವೆಯಾಗಬೇಕು. ಅನ್ನದಾನ, ವಿದ್ಯಾದಾನ, ಆರೋಗ್ಯ ದಾನವನ್ನು ಸಮಾಜವು ಒಂದು ಆದರ್ಶವಾಗಿ ರೂಪಿಸಲಾಗಿತ್ತು. ಈಗ ಇವೆಲ್ಲವೂ ವ್ಯಾಪಾರ, ಉದ್ಯಮಗಳಾಗಿವೆ ಎಂದು ವಿಷಾದಿಸಿದರು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು, ಅನ್ನ, ಅಕ್ಷರ ಮತ್ತು ಆರೋಗ್ಯವನ್ನು ಯಾವುದೇ ಹಣ ತೆಗೆದುಕೊಳ್ಳದೆ ಉಚಿತವಾಗಿ ಎಲ್ಲರಿಗೂ ಒದಗಿಸುತ್ತಿದ್ದಾರೆ. ಹೀಗಾಗಿಯೇ ಅವರು ಅವರು ದೇವತಾ ಮನುಷ್ಯರು ಎಂದರು.
ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ ಸತ್ಯ ಸಾಯಿ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆಗೆ ಒಂದೇ ಒಂದು ರೂಪಾಯಿ ಕೂಡ ಪಡೆಯುವುದಿಲ್ಲ. ಬಿಲ್ಲಿಂಗ್ ಕೌಂಟರ್ ಇಲ್ಲ. ಇಲ್ಲಿ ಎಲ್ಲ ಸೇವೆಗಳೂ ಉಚಿತವಾಗಿ ಸಿಗುತ್ತವೆ ಎಂದರು.
ಸಾಯಿ ಶ್ಯೂರ್ ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ. ಈ ಕಾರ್ಯಕ್ರಮದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗುತ್ತಿದೆ. ಉಚಿತ ಶಿಕ್ಷಣವನ್ನೂ ನೀಡಲಾಗುತ್ತಿದೆ. ಅನ್ನ, ಅಕ್ಷರ, ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡುವ ಮೂಲಕ ಈ ಮೂರು ಸೇವೆಗಳು ವಾಣಿಜ್ಯೀಕರಣದ ವಸ್ತುಗಳಲ್ಲ ಎಂಬುದಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ನಿದರ್ಶನ ರೂಪಿಸಿದ್ದಾರೆ ಎಂದರು.
ಸದ್ಗುರು ಮಧುಸೂದನ ಸಾಯಿ ಮಾತನಾಡಿ, ಸತ್ಯಸಾಯಿ ವಿಶ್ವವಿದ್ಯಾಲಯವು ಕರ್ನಾಟಕದಲ್ಲಿ ಮಾತ್ರವಲ್ಲದೆ ತನ್ನ ಸೇವೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲಿದೆ. ಶೀಘ್ರದಲ್ಲಿಯೇ ಇದು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಆಗಲಿದೆ ಎಂದರು.
ನಮ್ಮ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಭಾರತದ ಕರಾವಳಿಯನ್ನು ದಾಟಿ ಇತರ ದೇಶಗಳಿಗೂ ವಿಸ್ತರಿಸುತ್ತದೆ. ಆಫ್ರಿಕಾ ಮತ್ತು ಪೂರ್ವ ದೇಶಗಳಲ್ಲಿ ಅಗತ್ಯವಿರುವ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತದೆ ಎಂದು ವಿವರಿಸಿದರು.
ಇಂಡಿಯಾಸ್ಪೊರಾ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ಮತ್ತು ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನವನೀತ್ ಮುನೋಟ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ ನೀಡಲಾಯಿತು.
‘ಅದಮ್ಯ ಚೇತನ ಫೌಂಡೇಶನ್’ ಮತ್ತು 'ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್' ಸಂಸ್ಥೆಗೆ ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ’ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.