ADVERTISEMENT

ಚಿಕ್ಕಬಳ್ಳಾಪುರ: ಅರ್ಧಕ್ಕೆ ನಿಂತ ಸಿಸಿ ರಸ್ತೆ ಕಾಮಗಾರಿ

ಚೇಳೂರು ತಾಲ್ಲೂಕಿನ ಶಿವಪುರದ ದಲಿತರ ವಸತಿ ಪ್ರದೇಶ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 5:24 IST
Last Updated 24 ಅಕ್ಟೋಬರ್ 2025, 5:24 IST
ಶಿವಪುರ ಗ್ರಾಮದ ಮ್ಯಾಕಲ ನರಸಿಂಹಪ್ಪ ಅವರ ಮನೆ ಮುಂದೆ ನೀರು ನಿಂತು ಅನೈರ್ಮಲ್ಯ ಉಂಟಾಗಿರುವುದು
ಶಿವಪುರ ಗ್ರಾಮದ ಮ್ಯಾಕಲ ನರಸಿಂಹಪ್ಪ ಅವರ ಮನೆ ಮುಂದೆ ನೀರು ನಿಂತು ಅನೈರ್ಮಲ್ಯ ಉಂಟಾಗಿರುವುದು   

ಚೇಳೂರು: ತಾಲ್ಲೂಕಿನ ನಾರೆಮದ್ದೇಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ಗ್ರಾಮದ ದಲಿತರ ಕಾಲೊನಿಯಲ್ಲಿ ಕೈಗೊಂಡಿರುವ ಸಿ.ಸಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಬೀದಿಯ ಕೊನೆಯಲ್ಲಿರುವ ವೃದ್ಧ ದಂಪತಿಯ ಮನೆ ಮುಂಭಾಗ ಕೊಳಚೆಯ ಆಗರವಾಗಿದೆ.

ಗ್ರಾಮ ಪಂಚಾಯಿತಿಯಿಂದ 15ನೇ ಹಣಕಾಸು ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. ಮೂರು ತಿಂಗಳ ಹಿಂದೆ ಇಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ವೃದ್ಧ ದಂಪತಿ ಮ್ಯಾಕಲ ನರಸಿಂಹಪ್ಪ, ನರಸಮ್ಮ ಅವರ ಮನೆಯ ಮುಂಭಾಗದವರೆಗೆ ರಸ್ತೆ ನಿರ್ಮಿಸಿದ್ದರೆ. ಉಳಿದ ಕೆಲವೇ ಅಡಿಗಳ ಕಾಮಗಾರಿಯನ್ನು ಪೂರ್ಣಗೊಳಿಸದೆ ಹಾಗೆಯೇ ಬಿಡಲಾಗಿದೆ. ಈ ಪರಿಣಾಮ ಇಡೀ ಬೀದಿಯ ಮನೆಗಳಲ್ಲಿ ಉಪಯೋಗಿಸಿದ ಕೊಳಚೆ ನೀರು ಮತ್ತು ಮಳೆ ನೀರು ಈ ದಂಪತಿಯ ಮನೆ ಮುಂದೆ ನಿಂತು ಕೆರೆಯಂತಾಗಿದೆ. 

ಸಿಸಿ ರಸ್ತೆ ನಿರ್ಮಾಣದ ಮೊದಲು ಬೀದಿಯ ನೀರಿನ ಸಮರ್ಪಕ ವಿಲೇವಾರಿಗಾಗಿ ಚರಂಡಿ ನಿರ್ಮಿಸಬೇಕಿತ್ತು. ಆದರೆ, ಅಧಿಕಾರಿಗಳು ಚರಂಡಿ ನಿರ್ಮಾಣ ಮಾಡದೆ ಕೇವಲ ಸಿ.ಸಿ ರಸ್ತೆ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ. ಈ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಮುಂದೆ ಹರಿಯದೆ ಮನೆಯ ಮುಂದೆಯೇ ನಿಲ್ಲುವಂತಾಗಿದೆ.

ADVERTISEMENT

‘15 ದಿನ ಕಾಲಾವಕಾಶ ಕೊಡಿ, ರಸ್ತೆ ಹಾಕಿಸಿಕೊಡುತ್ತೇವೆ ಎಂದು ಇಲ್ಲಿ ಕಾಮಗಾರಿ ಮಾಡಿಸುತ್ತಿದ್ದ ಸದಸ್ಯರು ಹೇಳಿದ್ದರು. ಆದರೆ ಮೂರು ತಿಂಗಳು ಕಳೆದರೂ ಯಾರೂ ಬಂದಿಲ್ಲ. ಇದರಿಂದ ನಮ್ಮ ಮನೆಯ ಮುಂದೆ ಮಳೆ ನೀರು ಮತ್ತು ಚರಂಡಿ ನೀರು ನಿಂತು ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ’ ಎಂದು ದಂಪತಿ ತಿಳಿಸಿದರು.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅರ್ಧಕ್ಕೆ ನಿಂತಿರುವ ಸಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ, ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ದಲಿತರ ಕೇರಿಯ ನಿವಾಸಿಗಳು ಆಗ್ರಹಿಸುವರು. 

ಕಾಮಗಾರಿ ಪೂರ್ಣಗೊಳಿಸುವ ಭರವಸೆ

ಹಿಂದಿನ ವರ್ಷ ಬಂದಿರುವ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಅರ್ಧಕ್ಕೆ ನಿಂತಿರುವ ಭಾಗದ ಕಾಮಗಾರಿಗೆ ಪ್ರಸ್ತುತ 15ನೇ ಹಣಕಾಸು ಯೋಜನೆಯಡಿ ಅನುಮೋದನೆಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ವಿಶೇಷ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡು ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭ ಮಾಡಲಾಗುವುದು.
– ಕೆ. ವೆಂಕಟಾಚಲಪತಿ, ಪಿಡಿಒ ನಾರೆಮದ್ದೇಪಲ್ಲಿ

ಮನವಿ ಮಾಡಿದರೂ ನಿರ್ಲಕ್ಷ್ಯ

ಪಂಚಾಯಿತಿ ಸದಸ್ಯರು ಹಾಗೂ ಪಿಡಿಒ ಅವರಿಗೂ ಕಾಮಗಾರಿ ಪೂರ್ಣಗೊಳಿಸುವಂತೆ ಈಗಾಗಲೇ ಮನವಿ ಮಾಡಿದ್ದೇವೆ. ಆದರೂ ನಿರ್ಲಕ್ಷ್ಯ ವಹಿಸಿದ್ದಾರೆ.
– ಗಂಗುಲಪ್ಪ, ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.