ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್ ವಾಹನಗಳ (ಇವಿ ವಾಹನಗಳು) ಸಂಖ್ಯೆ ಹೆಚ್ಚುತ್ತಿದೆ. ನಗರಗಳಷ್ಟೇ ಅಲ್ಲ ಗ್ರಾಮಾಂತರ ಭಾಗಗಳಲ್ಲಿ ಜನರು ಇವಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 2020ರಿಂದ 2024ರವರೆಗೆ 1,759 ಮತ್ತು ಚಿಂತಾಮಣಿ ಪ್ರದೇಶಿಕ ಸಾರಿಗೆ ಕಚೇರಿಯಲ್ಲಿ 517 ಇವಿ ವಾಹನಗಳು ನೋಂದಣಿ ಆಗಿವೆ. ಹೀಗೆ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಎರಡೂ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 2,276 ಇವಿ ವಾಹನಗಳು ನೋಂದಣಿಯಾಗಿವೆ.
ಈ ಸಂಖ್ಯೆಯು ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಹೆಚ್ಚಳವನ್ನು ಎತ್ತಿ ತೋರುತ್ತಿದೆ. ಪೆಟ್ರೋಲ್ ಬೆಲೆ ದುಬಾರಿ ಕಾರಣಕ್ಕೆ ಬಹಳಷ್ಟು ಮಂದಿ ಇವಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಇವಿ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳ ಸಂಖ್ಯೆಯೂ ಹೆಚ್ಚಿದೆ.
ಚಿಕ್ಕಬಳ್ಳಾಪುರದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ, ತಾಲ್ಲೂಕು ಕೇಂದ್ರಗಳಲ್ಲಿನ ಬೆಸ್ಕಾಂ ಕಚೇರಿಗಳು, ವಿವಿಧ ಖಾಸಗಿ ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳ ಬಳಿಯೂ ಇವಿ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ವಾಹನಗಳನ್ನು ವೇಗವಾಗಿ ಚಾರ್ಜಿಂಗ್ ಮಾಡಿಕೊಳ್ಳಲು ಸಹ ಅವಕಾಶಗಳು ಇವೆ.
ದ್ವಿಚಕ್ರ ವಾಹನಗಳನ್ನು ಮನೆಗಳಲ್ಲಿಯೇ ಚಾರ್ಜಿಂಗ್ ಮಾಡಿದರೆ ಕಾರುಗಳನ್ನು ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಚಾರ್ಜಿಂಗ್ ಮಾಡಲಾಗುತ್ತಿದೆ.
ಚಿಕ್ಕಬಳ್ಳಾಪುರ, ಚಿಂತಾಮಣಿ ನಗರಗಳಲ್ಲಿ ಇವಿ ವಾಹನಗಳ ಮಾರಾಟ ಮಳಿಗೆಗಳು ಸಹ ಹೆಚ್ಚುತ್ತಿವೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರು ನಿವೇಶನಗಳನ್ನು ಖರೀದಿಸುವವರಿಗೆ ಆಫರ್ ಎನ್ನುವಂತೆ ಇವಿ ವಾಹನಗಳನ್ನು ಉಡುಗೊರೆಯಾಗಿ ನೀಡುವ ಪ್ರಕಟಣೆಗಳನ್ನು ಸಹ ಹೊರಡಿಸಿದ್ದಾರೆ.
ಇವಿ ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಆದರೆ ಅವುಗಳ ಬ್ಯಾಟರಿಗಳು ಹಾಳಾದರೆ ಹೆಚ್ಚು ಹಣ ತೆರಬೇಕಾಗುತ್ತದೆ. ಆದ ಕಾರಣ ಇನ್ನೂ ದೊಡ್ಡ ಸಂಖ್ಯೆಯಲ್ಲಿ ಇವಿ ವಾಹನ ಖರೀದಿಗೆ ಜನರು ಮನಸ್ಸು ಮಾಡುತ್ತಿಲ್ಲ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಇಲಾಖೆಯ ಕೆಲ ಸಿಬ್ಬಂದಿ.
ಬ್ಯಾಟರಿಗಳ ಬೆಲೆ ಗರಿಷ್ಠವಿದೆ. ಮುಂದಿನ ದಿನಗಳಲ್ಲಿ ಈ ಬ್ಯಾಟರಿಗಳು ಹಾಳಾದರೆ ಅವುಗಳ ಸಂಸ್ಕರಣೆಗೂ ಹಣ ನೀಡಬೇಕಾದ ಸ್ಥಿತಿ ಬರಬಹುದು. ನಗರ ಪ್ರದೇಶಗಳಲ್ಲಿ ಅಷ್ಟೇ ಇವಿ ವಾಹನ ಖರೀದಿಗೆ ಜನರು ಮನಸ್ಸು ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಎಂದು ತಿಳಿಸುವರು.
‘ಈ ಮೊದಲು ನಮ್ಮ ಬಳಿ ಬೈಕ್ ಇತ್ತು. ಹೆಚ್ಚು ಓಡಾಟದ ಕಾರಣ ಪೆಟ್ರೋಲ್‌ಗೆ ವಾರಕ್ಕೆ ಒಂದು ಸಾವಿರ ವೆಚ್ಚ ಮಾಡುತ್ತಿದ್ದೆವು. ಇವಿ ದ್ವಿಚಕ್ರ ವಾಹನ ಖರೀದಿಸಿದರೆ ಪೆಟ್ರೋಲ್‌ಗೆ ನೀಡುವ ಹಣ ಉಳಿತಾಯವಾಗುತ್ತದೆ ಎನಿಸಿತು. ಆ ಕಾರಣದಿಂದ ಇವಿ ವಾಹನ ಖರೀದಿಸಿದೆವು. ಖರೀದಿಸಿ ಒಂದು ವರ್ಷವಾಗಿದೆ. ಯಾವುದೇ ಸಮಸ್ಯೆ ಇಲ್ಲ. ಬಹಳಷ್ಟು ಸ್ನೇಹಿತರು, ನೆಂಟರು ಈ ವಾಹನದ ಬಗ್ಗೆ ಕೇಳಿದ್ದಾರೆ. ಚೆನ್ನಾಗಿದೆ ಎಂದೇ ಹೇಳಿದ್ದೇನೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ವ್ಯಾಪಾರಿ ಚಂದ್ರಪ್ಪ.
ಜಿಲ್ಲೆಯಲ್ಲಿ ಇವಿ ವಾಹನ ಖರೀದಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಚಿಂತಾಮಣಿಗಿಂತ ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ನೋಂದಣಿ ಹೆಚ್ಚಿದೆ ಎಂದು ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ವಿವೇಕಾನಂದ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.