
ಸಾವು (ಪ್ರಾತಿನಿಧಿಕ ಚಿತ್ರ)
ಚಿಕ್ಕಬಳ್ಳಾಪುರ: ‘ನನ್ನ 40 ದಿನದ ಹಸುಳೆಯನ್ನು ಅಜ್ಜಿಯೇ ಕೊಲೆ ಮಾಡಿದ್ದಾಳೆ’ ಎಂದು 17 ವರ್ಷದ ಬಾಲಕಿಯೊಬ್ಬಳು ದೂರು ನೀಡಿದ್ದಾಳೆ.
ದೂರಿನ ಹಿಂದೆಯೇ, ಅಂತ್ಯಸಂಸ್ಕಾರ ನಡೆದಿದ್ದ ಮಗುವಿನ ಶವವನ್ನು ಬುಧವಾರ ಚಿಕ್ಕಬಳ್ಳಾಪುರ ಅಪರಾಧ ವಿಭಾಗದ ತನಿಖಾ ತಂಡವು ತನಿಖೆಯ ಭಾಗವಾಗಿ ಸಮಾಧಿಯಿಂದ ಹೊರತೆಗೆಯಿತು.
ಚೇಳೂರು ತಹಶೀಲ್ದಾರ್ ಶ್ವೇತಾ ಹಾಗೂ ತಾಲ್ಲೂಕು ಆರೋಗ್ಯ ಆಡಳಿತಾಧಿಕಾರಿ ಸುಜಿತ್ ರೆಡ್ಡಿ, ವೈದ್ಯಾಧಿಕಾರಿ ಭಾಸ್ಕರ್ ಸಮಕ್ಷಮದಲ್ಲಿ ಪಂಚನಾಮೆ ನಡೆದಿದ್ದು, ಶವಪರೀಕ್ಷೆ ಮಾಡಲಾಯಿತು. ದೂರು ನೀಡಿದ ಬಾಲಕಿಯನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಆಕೆಯ ಪತಿಯ ವಿರುದ್ಧ ಪೋಕ್ಸೊ ಅನ್ವಯ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ಬಾಲಕಿ ರಾಜೇಶ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು.
ಇದೇ ನ.12ರಂದು ಬಾಲಕಿ ಆಂಧ್ರಪ್ರದೇಶದ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಡಿಸೆಂಬರ್‌ನಲ್ಲಿ ಮಗುವಿನೊಂದಿಗೆ ಹುಟ್ಟೂರಿಗೆ ಬಂದಿದ್ದರು.
‘ಮಗುವನ್ನು ಪೋಷಿಸುವುದಾಗಿ ಅಜ್ಜಿ ತೆಗೆದುಕೊಂಡಿದ್ದರು. ಆದರೆ, ಈಗ ಮಗು ಮೃತಪಟ್ಟಿದೆ ಎನ್ನುತ್ತಿದ್ದಾರೆ. ಮಗುವನ್ನು ಅಜ್ಜಿ ಕೊಲೆ ಮಾಡಿರುವ ಶಂಕೆ ಇದೆ. ತನಿಖೆ ನಡೆಸಿ’ ಎಂದು ಬಾಲಕಿ ದೂರು ನೀಡಿದ್ದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.