ADVERTISEMENT

ನೀರು, ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳು ಮರೀಚಿಕೆ: ಸ್ಥಳೀಯರ ಆರೋಪ

ಪಿ.ಎಸ್.ರಾಜೇಶ್
Published 17 ಸೆಪ್ಟೆಂಬರ್ 2025, 6:07 IST
Last Updated 17 ಸೆಪ್ಟೆಂಬರ್ 2025, 6:07 IST
ಬಾಗೇಪಲ್ಲಿಯ ಜಿ.ವಿ.ಶ್ರೀರಾಮರೆಡ್ಡಿ ಬಡಾವಣೆ ರಾಜಕಾಲುವೆಯಲ್ಲಿ ಅಳವಡಿಸಲು ಇಡಲಾದ ಪೈಪು
ಬಾಗೇಪಲ್ಲಿಯ ಜಿ.ವಿ.ಶ್ರೀರಾಮರೆಡ್ಡಿ ಬಡಾವಣೆ ರಾಜಕಾಲುವೆಯಲ್ಲಿ ಅಳವಡಿಸಲು ಇಡಲಾದ ಪೈಪು   

ಬಾಗೇಪಲ್ಲಿ: ಕುಡಿಯಲು ಶುದ್ಧ ನೀರಿಲ್ಲ, ಬೀದಿದೀಪಗಳಿಲ್ಲದೆ ರಾತ್ರಿ ಕಗ್ಗತ್ತಲು, ರಾಜಕಾಲುವೆ ಮೇಲೆ ನಡೆದಾಡಲು ಮೇಲ್ಚಾವಣಿ ಇಲ್ಲ. ಸಿಮೆಂಟ್ ರಸ್ತೆ ಮತ್ತು ಚರಂಡಿ ವ್ಯವಸ್ಥೆಯೂ ಇಲ್ಲ. ಸೊಳ್ಳೆ, ಹಾವುಗಳ ಕಾಟದಿಂದ ಪ್ರತಿನಿತ್ಯವೂ ಸಾವು–ಬದುಕಿನ ಮಧ್ಯೆ ಜೂಜಾಟದಂತೆ ಆಗಿದೆ ನಮ್ಮ ಬದುಕು. 

–ಇದು ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿ.ವಿ. ಶ್ರೀರಾಮರೆಡ್ಡಿ ಬಡಾವಣೆಯ ಪ್ರತಿಯೊಬ್ಬರ ಅಳಲು. 

ಪಟ್ಟಣದ ಸಂತೇಮೈದಾನ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆ-33ರ ಬೈಪಾಸ್ ರಸ್ತೆ ಮಾರ್ಗದ ತೀಮಾಲಕಪಲ್ಲಿ ಕ್ರಾಸ್ ಬಳಿ ಶ್ರೀರಾಮರೆಡ್ಡಿ ಬಡಾವಣೆ ನಿರ್ಮಿಸಲಾಗಿದೆ. ಇಲ್ಲಿ 389 ನಿವೇಶನಗಳನ್ನು ಮಾಡಿ, ನಿವೇಶನರಹಿತರಿಗೆ ಹಂಚಿಕೆ ಮಾಡಲಾಗಿತ್ತು. ಇದೀಗ 250ಕ್ಕೂ ಹೆಚ್ಚು ಮಂದಿಗೆ ಪುರಸಭೆಯಿಂದ ನಿವೇಶನದ ಮಂಜೂರಾತಿ ಪತ್ರ ಸಿಕ್ಕಿಲ್ಲ. ಮನೆಗಳ ನಿರ್ಮಾಣದ ಕಂತಿನ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ. ಇದರಿಂದ ಕೆಲವರು ಸಾಲ ಮಾಡಿ, ಒಡವೆ ಮಾರಿ, ಇಟ್ಟಿಗೆ, ಶೀಟು, ಸಿಮೆಂಟ್, ನೆಲದ ಕಲ್ಲುಗಳನ್ನು ಜೋಡಿಸಿಕೊಂಡಿದ್ದಾರೆ. ಕಿಟಿಕಿ, ಬಾಗಿಲುಗಳು ಇಡಲು ಹಣ ಹೊಂದಿಸಲಾಗದೆ, ಅಪೂರ್ಣವಾದ ಮನೆಯಲ್ಲೇ ಜನರ ಬದುಕು ಸಿಲುಕಿಕೊಂಡಿದೆ. 

ADVERTISEMENT

ಬಡಾವಣೆಯಲ್ಲಿ ಕೊಳವೆಬಾವಿ, ಓವರ್‍ಹೆಡ್ ನೀರಿನ ಟ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ ಇದೆ. ಆದರೆ, ಕೊಳವೆಬಾವಿಯಿಂದ ಮನೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗಿಲ್ಲ. ವಿದ್ಯುತ್ ವ್ಯತ್ಯಯದಿಂದ ನೀರು ಸಿಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಆಗಿ 5 ತಿಂಗಳು ಕಳೆದಿದೆ. ಶುದ್ಧ ಕುಡಿಯುವ ನೀರು ಸಿಗದೆ, ಜನರು ದ್ವಿಚಕ್ರ ವಾಹನಗಳು, ಆಟೋಗಳಲ್ಲಿ 3 ಕಿ.ಮೀ ದೂರ ಇರುವ ಪಟ್ಟಣಕ್ಕೆ ಬಂದು ನೀರು ಕೊಂಡೊಯ್ಯುತ್ತಿದ್ದಾರೆ. 

ತೀಮಾಕಲಪಲ್ಲಿ ಕ್ರಾಸ್‌ನಿಂದ ಬಡಾವಣೆಯೊಳಕ್ಕೆ ಪ್ರವೇಶಿಸಲು ಸಿಸಿ ರಸ್ತೆ ಇಲ್ಲ. ಮಣ್ಣಿನ ರಸ್ತೆಗಳು ಗುಂಡಿಮಯ ಆಗಿವೆ. ಮೊಣಕಾಲುದ್ದದ ಗುಂಡಿಗಳಲ್ಲಿ ಮಳೆ, ಚರಂಡಿ ನೀರು ಸಂಗ್ರಹ ಆಗಿದೆ. ಮಳೆಗಾಲದಲ್ಲಿ ಗುಂಡಿಗಳನ್ನು ತಪ್ಪಿಸಲು ಜನರು ಹರಸಾಹಸವೇ ಪಡಬೇಕಾಗಿದೆ.

ರಸ್ತೆಗಳ ಇಕ್ಕೆಲಗಳಲ್ಲಿ ಕಳೆ, ಮುಳ್ಳಿನ ಗಿಡಗಳು ಬೆಳೆದಿವೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ. ಮನೆಗಳ ಕಲುಷಿತ ನೀರು ರಸ್ತೆ, ಮನೆಗಳ ಮುಂದೆ ಗುಂಡಿಗಳಲ್ಲಿ ಸಂಗ್ರಹ ಆಗಿದೆ. ಕಲುಷಿತ ನೀರಿನಲ್ಲೇ ಕಾಲಿಟ್ಟುಕೊಂಡು ಹೋಗುವಂತಾಗಿದೆ. ಕಲುಷಿತ ನೀರಿನಿಂದ ದುರ್ನಾತ ಹೆಚ್ಚಿದೆ. ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಸೊಳ್ಳೆಗಳ ಕಾಟದಿಂದ, ಸಂಕ್ರಾಮಿಕ ರೋಗಗಳ ಭಯ ಉಂಟಾಗಿದೆ ಎಂದು ಸ್ಥಳೀಯರು ದೂರುತ್ತಾರೆ. 

ಮನೆಗಳಲ್ಲಿ ಉತ್ಪತ್ತಿಯಾಗುವ ಕಸ, ಕಡ್ಡಿ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದಿಲ್ಲ. ಕಸವನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಬಡಾವಣೆಯಲ್ಲಿ ರಾಶಿಗಟ್ಟಲೇ ಕಸ ಸಂಗ್ರವಾಗಿದೆ. ಇದರಿಂದ ಬೀದಿನಾಯಿಗಳು ಹೆಚ್ಚಾಗಿವೆ. ಇದರಿಂದಾಗಿ ಜನರು ನಾಯಿಗಳ ದಾಳಿಗೆ ತುತ್ತಾಗುವ ಭೀತಿಯಲ್ಲಿ ಬದುಕುವಂತಾಗಿದೆ.

ಬಡಾವಣೆ ನಿರ್ಮಿಸುವ ಜಾಗದಲ್ಲಿ ರಸ್ತೆ, ಚರಂಡಿ, ಬೀದಿದೀಪ, ಉದ್ಯಾನವನ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಬೇಕು. ಜೊತೆಗೆ ಬಡಾವಣೆ ನಿರ್ಮಿಸಿದ ಬಳಿಕ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕು. ಆದರೆ, ಪುರಸಭೆ ಆಡಳಿತ ಮಂಡಳಿಯು, ಕನಿಷ್ಠ ಸೌಲಭ್ಯ ಕಲ್ಪಿಸದೆ ಬಡಾವಣೆ ನಿರ್ಮಿಸಿ, ನಿವೇಶನಗಳನ್ನು ಹಂಚಿಕೆ ಮಾಡಿದೆ. ಇಲ್ಲಿ ಅಧಿಕಾರಿಗಳೇ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸ್ಥಳೀಯರು ದೂರಿದರು. 

ಶ್ರೀರಾಮರೆಡ್ಡಿ ಬಡಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು. ಬಡಾವಣೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿ ಇದೇ 17ರಂದು ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸುತ್ತೇವೆ ಎಂದು ವಾರ್ಡ್ ನಿವಾಸಿ ಕೆ. ಮುನಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಶ್ರೀರಾಮರೆಡ್ಡಿ ಬಡಾವಣೆ ಸೇರಿ ಪಟ್ಟಣದ ಸುತ್ತಮುತ್ತಲಿನ ಪಂಚಾಯಿತಿ ವ್ಯಾಪ್ತಿಯ ದಾಖಲೆಗಳನ್ನು ಪುರಸಭೆಗೆ ಹಸ್ತಾಂತರಿಸುವಂತೆ ಪರಗೋಡು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಗೆ ಪತ್ರ ಬರೆಯಲಾಗಿದೆ. ಆದರೆ, ನಿರಪೇಕ್ಷಣ ಪತ್ರ ಮಾತ್ರ ಕಚೇರಿಗೆ ಹಸ್ತಾಂತರಿಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ಸರ್ಕಾರದಿಂದ ಪುರಸಭೆ ಕಚೇರಿಗೆ ದಾಖಲೆಗಳು ಹಸ್ತಾಂತರವಾದಲ್ಲಿ, ಅಧಿಕೃತ ಆಗಲಿದೆ. ಮುಂದಿನ ದಿನಗಳಲ್ಲಿ ಬಡಾವಣೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ಶ್ರೀನಿವಾಸ್ ‘ಪ್ರಜಾವಾಣಿ’ ತಿಳಿಸಿದರು. 

ಬಡಾವಣೆಯ ಕೆಸರು ರಸ್ತೆಯಲ್ಲಿ ದ್ವಿಚಕ್ರ ವಾಹನ ನಡೆಸಲು ಹರಸಾಹಸ ಪಡುತ್ತಿರುವ ಸವಾರ
ರಿಪೇರಿಯಾಗಿರುವ ಶುದ್ಧ ಕುಡಿಯುವ ನೀರಿನ ಘಟಕ

ಪುರಸಭೆ ಕಚೇರಿಗೆ ಬಡಾವಣೆ ಜಾಗದ ಕಡತಗಳನ್ನು ಪರಗೋಡು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆಡಳಿತಮಂಡಲಿಯವರು ಹಸ್ತಾಂತರ ಮಾಡಿಲ್ಲ. ಕೇವಲ ನಿರೇಪೇಕ್ಷಣಾ ಪತ್ರ ಮಾತ್ರ ಪುರಸಭೆ ಕಚೇರಿಗೆ ನೀಡಲಾಗಿದೆ. ಆದರೆ ಬಡಾವಣೆಯ ಕಡತಗಳು ಹಸ್ತಾಂತರ ಮಾಡದೇ ಇರುವುದರಿಂದ, ಇಲ್ಲಿನ ನಿವಾಸಿಗಳಿಗೆ ಮತ್ತಷ್ಟು ಸಮಸ್ಯೆ ಹೆಚ್ಚಾಗಿದೆ. ನಿವಾಸಿಗಳಿಂದ ಪಂಚಾಯಿತಿಯವರು ನೀರಿನ ಬಿಲ್, ಹಣ ಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು, ಪುರಸಭೆ ಅಧಿಕಾರಿಗಳು, ಆಡಳಿತ ಮಂಡಲಿಯವರು ಇದೀಗ ರಸ್ತೆ, ಕುಡಿಯುವ ನೀರು, ಬೀದಿದೀಪಗಳು, ಬಿಲ್‍ಗಳು ಮಾಡಿಲ್ಲ. ಸರ್ಕಾರದ ಅನುದಾನಗಳನ್ನು ಬಳಕೆ ಮಾಡಿ, ಅಭಿವೃದ್ಧಿ ಪಡಿಸಿಲ್ಲ. ಬಡಾವಣೆಗೆ ಪುರಸಭೆಯಿಂದಲೂ, ಪಂಚಾಯಿತಿಯಿಂದಲೂ, ಸೌಲಭ್ಯಗಳು ಸಿಗದೇ ಜನರ ಜೀವನಗಳ ಜೊತೆ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರು ಚೆಲ್ಲಾಟ ಆಡುತ್ತಿದ್ದಾರೆ ಎಂದು ಬಡಾವಣೆಯ ನಿವಾಸಿಗಳು ಆರೋಪಿಸಿದ್ದಾರೆ. ರಾಜಕಾಲುವೆ ಪಕ್ಕದಲ್ಲಿ ನಿವೇಶನಗಳ ಹಂಚಿಕೆ ಮಾಡಲಾಗಿದೆ. ಇದೀಗ ಮನೆ ನಿರ್ಮಾಣ ಮಾಡಲಾಗಿದೆ. ಸುಗಮ ರಸ್ತೆಗಳು ಇಲ್ಲ. ಕಾಲುವೆಯಲ್ಲಿ ಇಳಿದು ಮನೆಗಳಿಗೆ ಸಂಚರಿಸಬೇಕು. ಕಾಲುವೆಯಲ್ಲಿ ಹಾವು, ಚೇಳುಗಳ ಇವೆ. ಕಾಲುವೆ ದಾಟಲು ಹೋಗಿ ಕಾಲು ಜಾರಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವುದು ನೋವಿನ ಸಂಗತಿ ಆಗಿದೆ ಎಂದು ಬಡಾವಣೆ ನಿವಾಸಿ ಡಿ.ಎಸ್.ಸಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ಬಡಾವಣೆಯಲ್ಲಿ ನೀರು ಬೀದಿದೀಪ ಚರಂಡಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಪುರಸಭೆ ಅಧಿಕಾರಿ ಸದಸ್ಯರು ಶಾಸಕರಿಗೆ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ರಾಜಕಾಲುವೆ ಪಕ್ಕ ನಿವೇಶನ ನೀಡಲಾಗಿದೆ. ಸುಗಮ ರಸ್ತೆ ಇಲ್ಲ. ಕಾಲುವೆಯಲ್ಲಿ ಇಳಿದು ಮನೆಗೆ ಬರಬೇಕು. ಕಾಲುಜಾರಿ ಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.
  ಡಿ.ಎಸ್. ಸಾಯಿ ಬಡಾವಣೆ ನಿವಾಸಿ
ಬಡಾವಣೆಯಲ್ಲಿ ನೀರು ಬೀದಿದೀಪ ಚರಂಡಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಪುರಸಭೆ ಅಧಿಕಾರಿ ಸದಸ್ಯರು ಶಾಸಕರಿಗೆ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಮಂಜುಳಮ್ಮ ಸ್ಥಳೀಯ ನಿವಾಸಿ

ಇನ್ನೂ ಸಿಗದ ಮಂಜೂರಾತಿ ಪತ್ರ ಜಿ.ವಿ. ಶ್ರೀರಾಮರೆಡ್ಡಿ ಹೆಸರಿನಲ್ಲಿ ಬಡಾವಣೆ ನಿರ್ಮಾಣ ಮಾಡಿ 15 ವರ್ಷ ಕಳೆದಿದೆ. ಆದರೆ ನಮಗಿನ್ನೂ ಮಂಜೂರಾತಿ ಪತ್ರ ಕೊಟ್ಟಿಲ್ಲ ಎಂದು ಬಡಾವಣೆ ನಿವಾಸಿ ದಸ್ತಗಿರ್ ಹೇಳಿದರು.  ‘ನಿವೇಶನದ ಅಗತ್ಯ ದಾಖಲೆಗಳನ್ನು ಪುರಸಭೆ ನಮಗೆ ಇಂದಿಗೂ ನೀಡಿಲ್ಲ. ಇದರಿಂದಾಗಿ ಇಲ್ಲಿ ವಾಸವಿರುವ ಕೆಲವು ಮಂದಿ ಪಡಿತರ ಚೀಟಿ ಆಧಾರ್ ಚೀಟಿ ಮತದಾನದ ಗುರುತಿನ ಚೀಟಿ ಮಾಡಿಸಲು ಸಾಧ್ಯವಾಗಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಆಗುತ್ತಿಲ್ಲ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಲು ಆಗುತ್ತಿಲ್ಲ. ಮನೆಗೆ ಸಂಬಂಧಿಸಿದ ಬಿಲ್ ದಾಖಲೆ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೆ ನಮ್ಮ ದಾಖಲೆಗಳು ಪುರಸಭೆ ಬಳಿ ಇಲ್ಲ ಎನ್ನುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.