ADVERTISEMENT

ಒಳ ಮೀಸಲಾತಿ ಸಮೀಕ್ಷೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2.96 ಲಕ್ಷ ಪರಿಶಿಷ್ಟರು

ಜಿಲ್ಲೆಯ ಶೇ 94ರಷ್ಟು ಪರಿಶಿಷ್ಟರು ಭಾಗಿ

ಡಿ.ಎಂ.ಕುರ್ಕೆ ಪ್ರಶಾಂತ
Published 12 ಆಗಸ್ಟ್ 2025, 6:55 IST
Last Updated 12 ಆಗಸ್ಟ್ 2025, 6:55 IST
<div class="paragraphs"><p>ನಾಗಮೋಹನದಾಸ್‌</p></div>

ನಾಗಮೋಹನದಾಸ್‌

   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ 74,044 ಕುಟುಂಬಗಳಿದ್ದು, ಒಟ್ಟು 2,96,656 ಸದಸ್ಯರು ಇದ್ದಾರೆ. ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ನಿಯೋಜಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ನೇತೃತ್ವದ ಆಯೋಗ ನಡೆಸಿರುವ ‘ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ’ಯಿಂದ ಈ ಅಂಶ ತಿಳಿದುಬಂದಿದೆ.

ಆಯೋಗವು ಮೇ 5ರಿಂದ ಜೂನ್ 30ರವರೆಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯವರ ಸಮೀಕ್ಷೆ ಕೈಗೊಂಡಿತ್ತು. ಶಾಲಾ ಶಿಕ್ಷಕರಿಂದ ಮನೆ ಭೇಟಿ ಮೂಲಕ, ನಾಗರಿಕ ಸೇವಾ ಕೇಂದ್ರಗಳಾದ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು, ಬಾಪೊಜಿ ಸೇವಾ ಕೇಂದ್ರ ಹಾಗೂ ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಮೂಲಕವೂ ನಡೆದಿದೆ.

ADVERTISEMENT

ಸಮೀಕ್ಷೆಯಲ್ಲಿ ಜಿಲ್ಲೆಯ ಶೇ 94.91ರಷ್ಟು ಪರಿಶಿಷ್ಟರು ಭಾಗಿ ಆಗಿದ್ದಾರೆ. ಸಮೀಕ್ಷೆ ಪ್ರಕಾರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.  

ನಾಗಮೋಹನ್ ದಾಸ್ ಆಯೋಗದ ಸಮೀಕ್ಷೆಯಲ್ಲಿ ಜಿಲ್ಲೆಯ ಪರಿಶಿಷ್ಟರಿಗೆ ಸಂಬಂಧಿಸಿದ ನಾನಾ ವಿಚಾರಗಳು ಅಡಕವಾಗಿವೆ. ಜಿಲ್ಲೆಯಲ್ಲಿ ಆಯೋಗವು 80,095 ಮನೆಗಳನ್ನು 2025ರ ಸಮೀಕ್ಷೆಗೆ ಒಳಪಡಿಸಿದೆ. ಒಟ್ಟಾರೆಯಾಗಿ ಶೇ 108.17ರಷ್ಟು ಕುಟುಂಬಗಳ ಸಮೀಕ್ಷೆ ನಡೆದಿದೆ. ಇದರಲ್ಲಿ ಶೇ 94.91ರಷ್ಟು ಪರಿಶಿಷ್ಟರು ಭಾಗಿ ಆಗಿದ್ದಾರೆ.   

ನಗರ ಪ್ರದೇಶದಲ್ಲಿಯೇ ಹೆಚ್ಚು: ಜಿಲ್ಲೆಯ ನಗರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಿದೆ. ಜಿಲ್ಲೆಯಲ್ಲಿ ಶೇ 45.10ರಷ್ಟು ಪರಿಶಿಷ್ಟ ಜಾತಿ ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಶೇ 44.79ರಷ್ಟು ಪರಿಶಿಷ್ಟ ಕುಟುಂಬಗಳು ನಗರದಲ್ಲಿವೆ. ಈ ಮೂಲಕ ರಾಜ್ಯದಲ್ಲಿ ನಾಲ್ಕನೇ ಸ್ಥಾನವನ್ನು ಚಿಕ್ಕಬಳ್ಳಾಪುರ ಹೊಂದಿದೆ.

ರಾಮನಗರ, ಧಾರವಾಡ ಮತ್ತು ತುಮಕೂರು ಕ್ರಮವಾಗಿ ಮೊದಲ ಎರಡನೇ ಮತ್ತು ಮೂರನೇ ಸ್ಥಾನವನ್ನು ಹೊಂದಿದೆ. ನಗರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 30ಕ್ಕಿಂತ ಹೆಚ್ಚು ಪರಿಶಿಷ್ಟರ ಜನಸಂಖ್ಯೆಯನ್ನು ಈ ಜಿಲ್ಲೆಗಳು ಹೊಂದಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ 80,807 ಪುರುಷರು, 81,826 ಮಹಿಳೆಯರು 38 ಮಂದಿ ಲಿಂಗತ್ವ ಅಲ್ಪಸಂಖ್ತಾತರಯ ಸೇರಿ ಪರಿಶಿಷ್ಟ ಸಮುದಾಯದ 1,62,671 ಮಂದಿ ಇದ್ದಾರೆ. ನಗರ ಪ್ರದೇಶದಲ್ಲಿ 66,301 ಮಂದಿ ಪುರುಷರು, 67,279 ಮಹಿಳೆಯರು, 30 ಮಂದಿ ಲಿಂಗತ್ವ ಅಲ್ಪಸಂಖ್ತಾತರು ಸೇರಿ 1,33,610 ಮಂದಿ ಪರಿಶಿಷ್ಟರು ವಾಸಿಸುತ್ತಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ ಜಿಲ್ಲೆಯಲ್ಲಿ 1,47,108 ಮಂದಿ ಪುರುಷರು, 1,49,,105 ಮಹಿಳೆಯರು 68 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. 

ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಗ್ರಾಮೀಣ ಪ್ರದೇಶದ ಕುಟುಂಬಗಳಿಗಿಂತ ಆರ್ಥಿಕವಾಗಿ ಮುಂದುವರಿದಿವೆ ಎಂದು ಆಯೋಗ ತಿಳಿಸಿದೆ.

ಹೆಚ್ಚಿದ ಬೇಡ, ಬುಡ್ಗ ಜಂಗಮ: ಆಂಧ್ರಪ್ರದೇಶದ ಗಡಿಭಾಗಗಳಲ್ಲಿ ಬೇಡ ಮತ್ತು ಬುಡ್ಗ ಜಂಗಮ ಸಮುದಾಯವು ಹೆಚ್ಚಿದೆ. ಬೇಡ ಜಂಗಮ ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿ ತೀವ್ರ ವಿವಾದಗಳು ಸಹ ತಲೆದೂರಿದ್ದವು. 

ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯ ಕ್ರ.ಸಂ 19ರಲ್ಲಿ ಬೇಡ ಜಂಗಮ ಮತ್ತು ಬುಡ್ಗ ಜಂಗಮ ಎಂದು ನಮೂದಿಸಲಾಗಿದೆ. 2011ರ ಜನಗಣತಿ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2,728 ಮಂದಿ ಈ ಸಮುದಾಯದವರು ಇದ್ದರು. ಪರಿಶಿಷ್ಟರ ಜಾತಿ ಗಣತಿಯಲ್ಲಿ ಬೇಡ ಜಂಗಮ ಮತ್ತು ಬುಡ್ಗ ಜಂಗಮ ಸಮುದಾಯವು ಜಿಲ್ಲೆಯಲ್ಲಿ 3,354 ಮಂದಿ ಇದ್ದಾರೆ ಎಂದು ಅಂದಾಜಿಸಲಾಗಿತ್ತು. ಈಗ ನಡೆದಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ 2025ರ ಪ್ರಕಾರ ಬುಡ್ಗ ಜಂಗಮ ಮತ್ತು ಬೇಡ ಜಂಗಮ ಸಮುದಾಯದ ಜನಸಂಖ್ಯೆ ಜಿಲ್ಲೆಯಲ್ಲಿ 2900 ಇದೆ.

ಜಿಲ್ಲೆಯಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಕೋರಿ 55 ಮಂದಿ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 20 ಅರ್ಜಿಗಳನ್ನು ಅನುಮೋದಿಸಲಾಗಿದೆ. 35 ಅರ್ಜಿಗಳು ತಿರಸ್ಕೃತವಾಗಿವೆ. ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರ ಕೋರಿ 3,968 ಮಂದಿ ಅರ್ಜಿ ಸಲ್ಲಿಸಿದ್ದು 2,937 ಅರ್ಜಿಗಳನ್ನು ಅನುಮೋದಿಸಲಾಗಿದೆ. 1,030 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಸಂಖ್ಯಾಬಲದ ಲೆಕ್ಕಾಚಾರ: ಸಮೀಕ್ಷೆ ಬೆನ್ನಲ್ಲೇ ಜಿಲ್ಲೆಯಲ್ಲಿ ಎಡ (ಮಾದಿಗ ಸಂಬಂಧಿತ ಜಾತಿಗಳು) ಮತ್ತು ಬಲ (ಹೊಲೆಯ ಸಂಬಂಧಿತ ಜಾತಿಗಳು) ಸಮುದಾಯಗಳಲ್ಲಿ ಯಾರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂಬ ಸಂಖ್ಯಾಬಲದ ಚರ್ಚೆ ಶುರುವಾಗಿದೆ. ಜಿಲ್ಲೆಯಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಿದೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.