ADVERTISEMENT

ವಿದೇಶಿ ಚಿಣ್ಣರೊಂದಿಗೆ ಬೆರೆತ ಮುತ್ತೂರ ಮಕ್ಕಳು

ಮುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 9:39 IST
Last Updated 24 ಅಕ್ಟೋಬರ್ 2019, 9:39 IST
ಮುತ್ತೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ಬೆಂಗಳೂರಿನ ಕೆನಡಿಯನ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು
ಮುತ್ತೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ಬೆಂಗಳೂರಿನ ಕೆನಡಿಯನ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು   

ಶಿಡ್ಲಘಟ್ಟ: ಮುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ವಿಶೇಷ ಅತಿಥಿಗಳು ಬಂದಿದ್ದರು. ಅವರೂ ವಿದ್ಯಾರ್ಥಿಗಳೇ ಆದರೂ ವಿವಿಧ ದೇಶಗಳವರು.

ಗ್ರಾಮಾಂತರ ಟ್ರಸ್ಟ್ ಮೂಲಕ ಬೆಂಗಳೂರಿನ ಕೆನಡಿಯನ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿರುವ 12 ವಿದ್ಯಾರ್ಥಿಗಳು ತಮ್ಮ ಇಬ್ಬರು ಶಿಕ್ಷಕಿಯರ ಜತೆ ಮುತ್ತೂರಿನ ಸರ್ಕಾರಿ ಶಾಲೆಗೆ ಬಂದಿದ್ದರು.

ಸರ್ಕಾರಿ ಶಾಲೆಯ ಪ್ರಾರ್ಥನೆ ಸಮಯಕ್ಕೆ ಬಂದ ಈ ವಿದ್ಯಾರ್ಥಿಗಳು ತಮ್ಮನ್ನು ಪರಿಚಯಿಸಿಕೊಂಡರು. ಮಕ್ಕಳೊಂದಿಗೆ ಬೆರೆತರು. ಭಾಷೆಯ ತೊಂದರೆಯಿದ್ದರೂ ಭಾವನೆಗಳನ್ನು ಮಕ್ಕಳು ಹಂಚಿಕೊಳ್ಳುವಲ್ಲಿ ಸಫಲ ರಾದರು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಮೂರು ಗುಂಪುಗಳನ್ನಾಗಿ ಮಾಡಿ, ಅವರೊಂದಿಗೆ ವಿವಿಧ ಕ್ರಿಯಾಶೀಲ ಚಟುವಟಿಕೆಗಳನ್ನು, ಮಾದರಿಗಳ ತಯಾರಿಕೆಗಳನ್ನು ಕೆನಡಿಯನ್ ಅಂತರರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಮಾಡಿಸಿದರು. ಸ್ಥಳೀಯ ಶಿಕ್ಷಕರು ಇಬ್ಬರಿಗೂ ಭಾಷಾನುವಾದ ಮಾಡಿ ಸಹಕರಿಸಿದರು.

ADVERTISEMENT

ವಿದೇಶಿ ಮೂಲದ ಮಕ್ಕಳಿಗೆ ಹಳ್ಳಿಯ ವಾತಾವರಣ ಪರಿಚಯಿಸಿದ ಸ್ಥಳೀಯ ಮಕ್ಕಳು ತಮ್ಮ ಪುಸ್ತಕ, ತಾವು ಓಡಾಡುವ ಜಾಗಗಳು, ರಜೆಯಲ್ಲಿ ತಾವು ಮಾಡುವ ದುಡಿಮೆ, ಹಸು, ಕರು, ರೇಷ್ಮೆ ಮುಂತಾದವುಗಳನ್ನು ತೋರಿಸಿದರು. ಮಕ್ಕಳು ಹಾಡು, ಆಟ ಆಡಿ ನಲಿದರು.

‘ಜಪಾನ್, ಅಮೆರಿಕ, ಮಲೇಷಿಯ ಮುಂತಾದ ದೇಶಗ ಳಿಂದ ಬಂದು ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿರುವವರ ಮಕ್ಕಳು ಕೆನಡಿಯನ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿದ್ದಾರೆ. ನಮ್ಮ ಶಾಲೆಯ ಪಠ್ಯದಲ್ಲಿ ಸಾಂದರ್ಭೋಚಿತ ಕಲಿಕೆ ಎಂಬುದಿದೆ. ಅದರಂತೆ ಹಳ್ಳಿಯ ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದೇವೆ. ಅವರಿಗೆ ಗ್ರಾಮೀಣ ಪರಿಸರ ಹಾಗೂ ಶಾಲೆಯನ್ನು ಪರಿಚಯಿಸುತ್ತಿದ್ದೇವೆ. ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳು ಕಲಿಯುವುದು ಮತ್ತು ಕಲಿಸುವುದು ಮಾಡಿದ್ದಾರೆ’ ಎಂದು ಕೆನಡಿಯನ್ ಅಂತರರಾಷ್ಟ್ರೀಯ ಶಾಲೆಯ ಶಿಕ್ಷಕಿ ಮಂಜುಳಾ ಮತ್ತು ಅಮೆಲಿ ತಿಳಿಸಿದರು.

‘ವಿವಿಧ ದೇಶಗಳ ಮಕ್ಕಳು ನಮ್ಮ ಶಾಲೆಗೆ ಬಂದಿರುವುದರಿಂದ ಮಕ್ಕಳಿಗೆ ಹೊಸ ವಿಷಯಗಳು ತಿಳಿಯುವಂತಾ ಯಿತು. ಗ್ರಾಮೀಣ ಮಕ್ಕಳಿಗೆ ಈ ರೀತಿಯ ಕಲಿಕೆ ಬಹಳ ಮುಖ್ಯ. ನಮ್ಮ ಮಕ್ಕಳಿಗೂ ದೇಶವಿದೇಶಗಳ ಬಗ್ಗೆ ಪರಿಚಯ, ಅವರ ಆಚಾರ ವಿಚಾರಗಳ ಬಗ್ಗೆ ಕುತೂಹಲ ಮೂಡಿ, ಅವರಲ್ಲೂ ವಿವಿಧ ದೇಶಗಳನ್ನು ನೋಡುವ ಕನಸಿಗೆ ರೆಕ್ಕೆ ಮೂಡಬಹುದು. ಭಾಷೆಯ ತೊಡಕಿನ ನಡುವೆಯೂ ಮಕ್ಕಳು ಬೆರೆತು ಸಂತಸದಿಂದ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡರು’ ಎಂದು ಶಾಲೆಯ ಶಿಕ್ಷಕ ಎಸ್.ದಾವೂದ್ ಪಾಷ ತಿಳಿಸಿದರು.

ಗ್ರಾಮಾಂತರ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಉಷಾ ಶೆಟ್ಟಿ, ಶಾಲೆಯ ಮುಖ್ಯಶಿಕ್ಷಕಿ ಜಿ.ಎನ್.ಅಹಲ್ಯ, ಶಿಕ್ಷಕರಾದ ಎಂ.ಪ್ರೇಮಲೀಲಾ, ಎಂ.ಜಿ.ವನಿತಾ ಹಾಜರಿದ್ದರು.

*
ಇಂದು ಹಳ್ಳಿಯಲ್ಲಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳೊಂದಿಗೆ ಬೆರೆತು ನಾವು ಕೆಲವು ಮಾದರಿಗಳನ್ನು ಮಾಡಿದೆವು. ಈ ದಿನವನ್ನು ನಾವು ಎಂದಿಗೂ ಮರೆಯುವುದಿಲ್ಲ.
-ಕ್ವಿನ್, ಕೆನಡಿಯನ್ ಅಂತರರಾಷ್ಟ್ರೀಯ ಶಾಲೆ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.