ಗೌರಿಬಿದನೂರು ತಾಲ್ಲೂಕಿನ ಅಲೀಪುರಕ್ಕೆ ಇರಾನ್ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ 1986ರಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಸೆರೆ ಹಿಡಿದ ಚಿತ್ರ (ಸಂಗ್ರಹ ಚಿತ್ರ)
ಚಿಕ್ಕಬಳ್ಳಾಪುರ: ಇರಾನ್ ನೆಲದಲ್ಲಿ ಯುದ್ಧ ತೀವ್ರವಾಗುತ್ತಿದ್ದರೆ ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮಸ್ಥರಲ್ಲಿ ದುಗುಡ ಹೆಚ್ಚಾಗುತ್ತದೆ.
ಅಲೀಪುರ ಮತ್ತು ಇರಾನ್ ನಡುವೆ ಹಲವು ದಶಕಗಳ ಕಳ್ಳು ಬಳ್ಳಿಯ ಸಂಬಂಧ ಇದೆ. ಇರಾನ್‌ನಲ್ಲಿ ಅಲೀಪುರದ ನೂರಕ್ಕೂ ಹೆಚ್ಚು ಜನರು, ವಿದ್ಯಾರ್ಥಿಗಳು ನೆಲೆಸಿದ್ದಾರೆ. ಹಾಗಾಗಿ ಈ ಗ್ರಾಮದ ಜನರಿಗೆ ಇರಾನ್ ಒಡನಾಟ, ಬಾಂಧವ್ಯ ಹೆಚ್ಚು.
ಇರಾನ್ ಮತ್ತು ಇಸ್ರೇಲ್ ಯುದ್ಧದ ಕ್ಷಣ, ಕ್ಷಣದ ಮಾಹಿತಿ, ಬೆಳವಣಿಗೆಗಳು ಈ ಗ್ರಾಮದ ಜನರನ್ನು ತಲುಪುತ್ತವೆ. ಕ್ಷಿಪಣಿ ದಾಳಿ ವೇಳೆ ಅಲ್ಲಿ ಮೊಳಗುವ ಸೈರನ್ ಶಬ್ದ ಮೊಬೈಲ್ ಕರೆಯ ಮೂಲಕ ಅಲೀಪುರದಲ್ಲೂ ಪ್ರತಿಧ್ವನಿಸುತ್ತದೆ. ಅಲ್ಲಿ ಕ್ಷಿಪಣಿ ಬಿದ್ದರೆ ಇಲ್ಲಿ ಹೃದಯ ಬಡಿತ ಹೆಚ್ಚಾಗುತ್ತದೆ. ಇರಾನ್‌ನಲ್ಲಿರುವ ಗ್ರಾಮಸ್ಥರು ಸುರಕ್ಷಿತವಾಗಿರಲಿ. ಅವರಿಗೆ ಏನೂ ಆಗದಿರಲಿ ಎಂದು ಗ್ರಾಮದಲ್ಲಿ ನಿತ್ಯ ಪ್ರಾರ್ಥನೆ ನಡೆಯುತ್ತವೆ.
ವೈದ್ಯಕೀಯ ಶಿಕ್ಷಣ, ಧಾರ್ಮಿಕ ಶಿಕ್ಷಣದ ಕಾರಣಕ್ಕೆ ಅಲೀಪುರದ ಶಿಯಾ ಮುಸ್ಲಿಮರಿಗೆ ಇರಾನ್ ಅಚ್ಚುಮೆಚ್ಚಿನ ತಾಣ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರದ್ದೇ ಪ್ರಾಬಲ್ಯ. ಇರಾನ್ ತಮ್ಮ ಪವಿತ್ರ ಧಾರ್ಮಿಕ ಭೂಮಿ ಎನ್ನುವ ಪೂಜ್ಯ ಭಾವನೆ ಇಲ್ಲಿನ ಜನರದ್ದು. ಅಯಾತೊಲ್ಲಾ ಖಮೇನಿ ಧಾರ್ಮಿಕ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವ ದೊಡ್ಡ ವರ್ಗವೇ ಇಲ್ಲಿದೆ.
ಅಲೀಪುರಕ್ಕೆ ಬಂದಿದ್ದ ಖಮೇನಿ!
ಅಯಾತೊಲ್ಲಾ ಖಮೇನಿ 1986ರಲ್ಲಿ ಅಲೀಪುರಕ್ಕೆ ಭೇಟಿ ನೀಡಿದ್ದರು. ಇದು ಇರಾನ್ ಮತ್ತು ಅಲೀಪುರದ ಬಾಂಧವ್ಯಕ್ಕೆ ಸಾಕ್ಷಿ. ಖಮೇನಿ ಗುರು ಇರಾನ್ ಧಾರ್ಮಿಕ ನಾಯಕ ಅಯಾತೊಲ್ಲಾ ಇಮಾಮ್ ಖಮೇನಿ ಹೆಸರಲ್ಲಿ ಅಲೀಪುರದಲ್ಲಿ ಆಸ್ಪತ್ರೆ ಇದೆ. ಇದರ ಉದ್ಘಾಟನೆಗಾಗಿಯೇ ಖಮೇನಿ ಗ್ರಾಮಕ್ಕೆ ಬಂದಿದ್ದರು. ‘ಅಲೀಪುರದ ವರ್ತಕರು ಚಿನ್ನಾಭರಣ ವಜ್ರ ಹರಳು ವ್ಯಾಪಾರ ಮಾಡುತ್ತಾರೆ. ಆದರೆ ಇರಾನ್ ಜತೆ ವ್ಯಾಪಾರಕ್ಕಿಂತ ಧಾರ್ಮಿಕ ಸಂಬಂಧ ಗಾಢವಾಗಿ ಬೆಸೆದುಕೊಂಡಿದೆ. ಏಕೆಂದರೆ ಶಿಯಾ ಮುಸ್ಲಿಮರ ಪ್ರಮುಖ ಧಾರ್ಮಿಕ ಸ್ಥಳ ಮಶದ್ ಇರಾನ್‌ನಲ್ಲಿದೆ’ ಎಂದು ಗ್ರಾಮದ ಶಫೀಕ್ ‘ಪ್ರಜಾವಾಣಿ’ಗೆ ತಿಳಿಸಿದರು. ಧಾರ್ಮಿಕ ಅಧ್ಯಯನಕ್ಕಾಗಿ ಗ್ರಾಮದ 50ಕ್ಕೂ ಹೆಚ್ಚು ಮಂದಿ ಇರಾನ್‌ನಲ್ಲಿ ನೆಲೆಸಿದ್ದಾರೆ. 15 ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿದಿನ ಕರೆ ಮಾಡಿ ಬಂಧು ಬಾಂಧವರ ಯೋಗಕ್ಷೇಮ ವಿಚಾರಿಸುತ್ತಾರೆ ಎಂದರು. ‘ನಾವು ಚಿಕ್ಕವರಾಗಿದ್ದಾಗ ಖಮೇನಿ ಅವರು ನಮ್ಮ ಊರಿಗೆ ಭೇಟಿ ನೀಡಿದ್ದರು. ಆಗಲೇ ಅಲೀಪುರವನ್ನು ಬೇಬಿ ಆಫ್ ಇರಾನ್ ಎನ್ನುತ್ತಿದ್ದರು’ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂಸ್ಥೆ ಅಧ್ಯಕ್ಷ ಅಲೀಪುರದ ಆರಿ ಅಸ್ಕಿಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.