ಚಿಕ್ಕಬಳ್ಳಾಪುರ: ವಿಚಾರಣಾಧೀನ ಕೈದಿಗಳು ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹ ಮತ್ತೆ ಸುದ್ದಿಯಲ್ಲಿದೆ.
ಅಧ್ವಾನಗಳ ಕಾರಣಕ್ಕೆ ಜಿಲ್ಲಾ ಕಾರಾಗೃಹವು ಆಗಾಗ್ಗೆ ಸುದ್ದಿ ಆಗುತ್ತಿತ್ತು. ಆದರೆ ಈಗ ಜೈಲರ್, ಸಹಾಯಕ ಜೈಲರ್ ಮಲ್ಲಿಕಾರ್ಜುನಪ್ಪ ಹಾಗೂ ಸಿಬ್ಬಂದಿಯ ಮೇಲಿನ ಹಲ್ಲೆಯ ಕಾರಣದಿಂದ ಜೈಲಿನೊಳಗಿನ ‘ವ್ಯವಹಾರ’ಗಳು ಚರ್ಚೆಗೆ ಕಾರಣವಾಗಿದೆ.
ಜಿಲ್ಲಾ ಕಾರಾಗೃಹದ ಅಧಿಕಾರಿಗಳ ಮೇಲೆ ವಿಚಾರಣಾಧೀನ ಕೈದಿಗಳು ಹಲ್ಲೆ ನಡೆಸಿರುವುದು ಇಲ್ಲಿನ ಸಿಬ್ಬಂದಿಯ ಲೋಪಗಳನ್ನೂ ಎತ್ತಿ ತೋರುತ್ತಿದೆ.
‘ಕಾರಾಗೃಹದಲ್ಲಿರುವ ಕೈದಿಗಳನ್ನು ಅವರ ಕುಟುಂಬ ಸದಸ್ಯರು ಭೇಟಿ ಮಾಡಬೇಕು ಎಂದರೆ ಅಥವಾ ಕೈದಿಗಳು ನಿಯಮಗಳನ್ನು ಮೀರಿ ಸೌಲಭ್ಯಗಳನ್ನು ಪಡೆಯಲು ಸಿಬ್ಬಂದಿಗೆ ಹಣ ನೀಡಬೇಕು. ಕೆಲವರು ಕೈದಿಗಳು ಮೊಬೈಲ್ ಸಹ ಬಳಸುವರು’ ಎಂದು ಎಂದು ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸುವರು.
ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು ಸಹ ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಆಗ ತಂಬಾಕು, ಮತ್ತಿತರ ವಸ್ತುಗಳು ಸಹ ಪತ್ತೆಯಾಗಿದ್ದವು ಎನ್ನುತ್ತವೆ ಮೂಲಗಳು.
ಉಪಲೋಕಾಯುಕ್ತರಿಂದ ಪ್ರಕರಣ: ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದ ಅಧ್ವಾನಗಳು ಇಂದಿನದ್ದೇನಲ್ಲ. ಈ ಹಿಂದೆಯೂ ಅವ್ಯವಸ್ಥೆಗಳು ಕಂಡು ಬಂದಿದ್ದವು. 2022ರ ನವೆಂಬರ್‌ನಲ್ಲಿ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದ 10 ಸಿಬ್ಬಂದಿ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ.5ರಿಂದ 7ರವರೆಗೆ ಕೆ.ಎನ್.ಫಣೀಂದ್ರ ಅವರು ಹಾಗೂ ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳು ಜಿಲ್ಲೆಯಲ್ಲಿ ಪ್ರವಾಸಕೈಗೊಂಡಿದ್ದರು. ನ.6ರಂದು ಸಂಜೆ ನಗರದ ಹೊರವಲಯದ ಅಣಕನೂರಿನ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಅಲ್ಲಿ ವಿಚಾರಣಾಧೀನ ಕೈದಿಗಳ ಕುಂದುಕೊರತೆಗಳನ್ನು ಆಲಿಸಿದ್ದರು.
ಈ ವೇಳೆ ಕೈದಿಗಳು ಲೋಕಾಯುಕ್ತರಿಗೆ ಆಹಾರ, ಔಷಧ ಮತ್ತಿತರ ಸೌಲಭ್ಯಗಳನ್ನು ಸಮರ್ಪಕವಾಗಿ ಜೈಲು ಸಿಬ್ಬಂದಿ ನೀಡುತ್ತಿಲ್ಲ ಎಂದು ದೂರಿದ್ದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಜಯರಾಮಯ್ಯ ಉಪ ಲೋಕಾಯುಕ್ತರ ಭೇಟಿ ವೇಳೆ ಹಾಜರಿರಲಿಲ್ಲ. ಉಪಲೋಕಾಯುಕ್ತರು ಭೇಟಿ ನೀಡಿದ್ದ ವೇಳೆ ಹಲವು ಸಮಸ್ಯೆಗಳು ಕಂಡಿದ್ದವು. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳುವಂತೆ ಉಪ ಲೋಕಾಯುಕ್ತರು ಸೂಚಿಸಿದ್ದರು. ದೂರಿನಲ್ಲಿ ಕಾರಾಗೃಹದಲ್ಲಿನ ಅವ್ಯವಸ್ಥೆಗಳ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿತ್ತು.
2022ರ ಜೂ.8ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಲಕ್ಷ್ಮಿಕಾಂತ್ ಜೆ.ಮಿಸ್ಕಿನ್ ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದರು. ಕೈದಿಗಳ ಕುಂದುಕೊರತೆಗಳನ್ನು ಆಲಿಸುವಾಗ ಸ್ಥಳದಲ್ಲಿದ್ದ ಪೊಲೀಸರನ್ನು ಹೊರಗೆ ಕಳುಹಿಸಿದರು.
ನ್ಯಾಯಾಧೀಶರ ಪರಿಶೀಲನೆ ವೇಳೆ ಕಾರಾಗೃಹದಲ್ಲಿ ಬಿಡಿ ಮತ್ತು ಬೆಂಕಿಪಟ್ಟಣದ ಸುಟ್ಟ ಕಡ್ಡಿಗಳು, ಗುಟ್ಕಾ, ಸಿಗರೇಟ್ ಪ್ಯಾಕ್‌ಗಳು ಪತ್ತೆಯಾಗಿದ್ದವು. ಈ ವೇಳೆ ಕೈದಿಗಳ ಜೇಬಿನಲ್ಲಿದ್ದ ಇದ್ದ ಬಿಡಿಗಳನ್ನು ತೆಗೆಸಿದರು. ಜೈಲು ಸಿಬ್ಬಂದಿಯ ಗಮನಕ್ಕೆ ಬಾರದೆಯೇ ಇವು ಇಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೀಗೆ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹವು ಅಧ್ವಾನಗಳ ಆಗರ ಎನ್ನುವ ಮಾತುಗಳು ಪೊಲೀಸ್ ಇಲಾಖೆಯಲ್ಲಿಯೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.