ADVERTISEMENT

ಬೆಂಗಳೂರು ಗ್ರಾಮಾಂತರ ಇನ್ನು ‘ಉತ್ತರ ಜಿಲ್ಲೆ’?

ನಂದಿ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಹೆಸರು ಬದಲಾವಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 23:21 IST
Last Updated 1 ಜುಲೈ 2025, 23:21 IST
ಬೆಂಗಳೂರು ಗ್ರಾಮಾಂತರ ಜಿಲ್ಲಾ ನಕ್ಷೆ
ಬೆಂಗಳೂರು ಗ್ರಾಮಾಂತರ ಜಿಲ್ಲಾ ನಕ್ಷೆ   

ಚಿಕ್ಕಬಳ್ಳಾಪುರ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಿದ ಸರ್ಕಾರ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ‘ಬೆಂಗಳೂರು ಉತ್ತರ’ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಮುಂದಾಗಿದೆ. 

ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಬುಧವಾರ (ಜುಲೈ 2) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ಪ್ರಸ್ತಾಪ ಮಂಡನೆಯಾಗುವ ಮತ್ತು ಸಭೆ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ.  

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಭಾಗವನ್ನು ರಿಯಲ್ ಎಸ್ಟೇಟ್ ಪರಿಭಾಷೆಯಲ್ಲಿ ಬೆಂಗಳೂರು ಉತ್ತರ ಎಂದೇ ಕರೆಯಲಾಗುತ್ತದೆ. 

ADVERTISEMENT

‘ಬ್ರಾಂಡ್‌ ಬೆಂಗಳೂರು’ ಮೌಲ್ಯ ಮತ್ತು ಲಾಭವನ್ನು ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಗೂ ವಿಸ್ತರಿಸಲು ಈ ನಿರ್ಣಯ ಕೈಗೊಳ್ಳುತ್ತಿರುವುದಾಗಿ ಸರ್ಕಾರ ಸಮರ್ಥಿಸಿಕೊಂಡಿದೆ.  

1986ರಲ್ಲಿ ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚಿಸಲಾಯಿತು. ಆ ಸಮಯದಲ್ಲಿ ರಾಮನಗರ ಜಿಲ್ಲೆಯ ತಾಲ್ಲೂಕುಗಳೂ ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟಿದ್ದವು.

ನಂತರ 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ರಾಮನಗರ ಜಿಲ್ಲೆ ರಚಿಸಲಾಯಿತು. ಈಚೆಗೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಲಾಗಿದೆ. ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು ಉತ್ತರ ಜಿಲ್ಲೆ ಎಂದು ಬದಲಾಗುವ ನಿರೀಕ್ಷೆ ಇದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಹೆಸರನ್ನು ‘ಭಾಗ್ಯನಗರ’ ಎಂದು ಬದಲಿಸುವಂತೆ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೂ ಅನುಮೋದನೆ ದೊರೆಯುವ ಸಾಧ್ಯತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.