
ಚಿಕ್ಕಬಳ್ಳಾಪುರ: ತಮಿಳುನಾಡಿನ ಕೋಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ನಡೆಯುವ ಶಿವರಾತ್ರಿ ಕಾರ್ಯಕ್ರಮದ ನೇರ ಪ್ರಸಾರವು ಚಿಕ್ಕಬಳ್ಳಾಪುರದ ಈಶಾ ಯೋಗ ಕೇಂದ್ರದಲ್ಲಿ ಇರಲಿದೆ ಎಂದು ಚಿಕ್ಕಬಳ್ಳಾಪುರ ಈಶಾ ಯೋಗ ಕೇಂದ್ರದ ಸ್ವಾಮಿ ವಿಮೋಹ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರದ ಸನ್ನಿಧಿಯಲ್ಲಿ 4ನೇ ವರ್ಷ ಮಹಾಶಿವರಾತ್ರಿಯ ಆಚರಣೆ ನಡೆಯುತ್ತದೆ ಎಂದರು.
ಕೋಯಮತ್ತೂರು ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಚಿವ ಎಲ್. ಮುರುಗನ್ ಹಾಗೂ ಗಣ್ಯರು ಭಾಗವಹಿಸುವರು ಎಂದು ಹೇಳಿದರು.
23 ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ 100 ವಾಹಿನಿಗಳಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವಿದೆ. ಈ ಬಾರಿ 14 ಕೋಟಿಗೂ ಹೆಚ್ಚು ವೀಕ್ಷಕರನ್ನು ತಲುಪುವ ನಿರೀಕ್ಷೆಯಿದೆ. ಕಳೆದ ವರ್ಷದ ಶಿವರಾತ್ರಿ ದಿನ ಚಿಕ್ಕಬಳ್ಳಾಪುರದ ಕೇಂದ್ರದಲ್ಲಿ 2 ಲಕ್ಷ ಜನರು ಭಾಗವಹಿಸಿದ್ದರು. ಈ ವರ್ಷ 3 ಲಕ್ಷ ಭಕ್ತರನ್ನು ನಿರೀಕ್ಷಿಸಿದ್ದೇವೆ ಎಂದು ಹೇಳಿದರು.
ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಇದೆ. 1 ಲಕ್ಷ ರುದ್ರಾಕ್ಷಿ ವಿತರಿಸಲಾಗುತ್ತದೆ. ಭಕ್ತರಿಗೆ ಅನುಕೂಲ ಆಗುವಂತೆ ಯೋಗ ದ್ವಾರದಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಯೋಗ ಕೇಂದ್ರಕ್ಕೆ ಬರಲು ಉಚಿತವಾಗಿ ಸಾರಿಗೆ ವ್ಯವಸ್ಥೆ ಇರಲಿದೆ ಎಂದರು.
ಭಕ್ತರು ಹಾಗೂ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆಯು ಹೊಸ ಪೊಲೀಸ್ ಹೊರಠಾಣೆ ಸಹ ತೆರೆದಿದೆ. ಸ್ವಯಂಸೇವಕರ ಜೊತೆ 300 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಎನ್‌ಸಿಸಿಯವರು ಸಹಕರಿಸಲಿದ್ದಾರೆ ಎಂದು ಹೇಳಿದರು.
ಎರಡು ಆಂಬುಲೆನ್ಸ್, ಅಗ್ನಿಶಾಮಕದ ಸೇವೆಗಳು ಇರಲಿವೆ. ಈಗಿರುವ ಶೌಚಾಲಯಗಳ ಜೊತೆಗೆ ಹೆಚ್ಚುವರಿ ಶೌಚಾಲಯಗಳನ್ನೂ ಕಾರ್ಯಕ್ರಮಕ್ಕಾಗಿ ಸಜ್ಜುಗೊಳಿಸಲಾಗಿದೆ ಎಂದು ವಿವರಿಸಿದರು.
ಯಾರನ್ನೂ ಒಕ್ಕಲೆಬ್ಬಿಸುತ್ತಿಲ್ಲ
ಈಶಾ ಯೋಗ ಕೇಂದ್ರವು ಯಾವ ರೈತರನ್ನೂ ಒಕ್ಕಲೆಬ್ಬಿಸಿಲ್ಲ. ಸಂಸ್ಥೆಯ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಗುರುವಾರ (ಫೆ.12) ಕೆಲವರು ಜೆಸಿಬಿ ಐದಾರು ಕಾರು 15ರಿಂದ 20 ಬೈಕ್‌ಗಳಲ್ಲಿ ಬಂದು ಅಲ್ಲಿದ್ದ ಬ್ಯಾರಿಕೇಡ್‌ಗಳನ್ನು ನಾಶಗೊಳಿಸಿದ್ದಾರೆ ಎಂದು ಸ್ವಾಮಿ ವಿಮೋಹ ತಿಳಿಸಿದರು. ಈ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಎಫ್‌ಐಆರ್ ಸಹ ಆಗಿದೆ. ನಮ್ಮ ಬಳಿಯ ದಾಖಲೆಗಳನ್ನು ಪೊಲೀಸ್ ಠಾಣೆಗೆ ಸಲ್ಲಿಸಿದ್ದೇವೆ. ಯಾರು ರೈತರ ಹೆಸರು ಹೇಳಿಕೊಂಡು ಬಂದಿದ್ದಾರೆಯೊ ಅವರು ಅವರ ಬಳಿ ದಾಖಲೆಗಳಿದ್ದರೆ ಸಲ್ಲಿಸಲಿ. ಈ ವಿಚಾರವಾಗಿ ನ್ಯಾಯಾಲಯದ ತೀರ್ಮಾನಕ್ಕೆ ನಾವು ಬದ್ಧ ಎಂದು ಹೇಳಿದರು. ಈಶಾ ಕೇಂದ್ರವು ರೈತರಿಗೆ ಬಹಳಷ್ಟು ಕಾರ್ಯಕ್ರಮ ನಡೆಸುತ್ತಿದೆ. ರಾಜ್ಯದಲ್ಲಿ ಆರು ರೈತ ಉತ್ಪಾದಕ ಸಂಸ್ಥೆಗಳನ್ನು ರೂಪಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಒಂದು ಇಂಚು ಜಮೀನು ಸಹ ನಾವು ಅನಧಿಕೃತವಾಗಿ ಬಳಸಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.