ಕೆರೆ ನೀರು
ಚಿಕ್ಕಬಳ್ಳಾಪುರ: ಕೆಲವು ಕಡೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೊಳವೆಬಾವಿ ಕೊರೆದಾಗ ನೀರು ದೊರೆಯುತ್ತಿದೆ. ಆದರೆ ಮೋಟರ್, ಕೇಬಲ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡದೆ ನೀರು ಪೂರೈಕೆ ಆಗದಿರುವ ಪ್ರಕರಣಗಳನ್ನು ಗಮನಿಸಿದ್ದೇನೆ. ಆ ರೀತಿಯಲ್ಲಿ ಆಗಬಾರದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಎಚ್ಚರಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ‘ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶಿಲನೆ ಮತ್ತು ಜಿಲ್ಲಾ ನೀರು ಮತ್ತು ನೈರ್ಮಲ್ಯ ಟಾಸ್ಕ್ ಪೋರ್ಸ್ ಸಮಿತಿ’ಯಲ್ಲಿ ಮಾತನಾಡಿದರು.
ಕುಡಿಯುವ ನೀರು ಪೂರೈಕೆಗಾಗಿ ಕೊರೆಯುವ ಕೊಳವೆ ಬಾವಿಗಳಿಗೆ ನೀರು ದೊರಕಿದ ಕೂಡಲೇ ವಿದ್ಯುತ್ ಸಂಪರ್ಕ ಸೇರಿದಂತೆ ಸೌಕರ್ಯಗಳನ್ನು ಅಳವಡಿಸಿ ನೀರು ಹೊರತೆಗೆದು ಪೂರೈಸುವ ಕೆಲಸವು ಯೋಜಿತವಾಗಿ ಕಾಲಮಿತಿಯೊಳಗೆ ಆಗಬೇಕು ಎಂದರು.
ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಬೇಕು. ‘ಮೋಟರ್ ಅಳವಡಿಸದೆ ನೀರು ತೆಗೆಯಲು ಆಗಿಲ್ಲ’ ಎಂದು ನಮ್ಮ ಜಿಲ್ಲೆಯಲ್ಲಿ ದೂರು ಬರಬಾರದು. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಬೇಕು ಎಂದು ಸೂಚಿಸಿದರು.
ನೀರು ಪೂರೈಕೆಗಾಗಿ ಜಲಜೀವನ್ ಮಿಷನ್ ಯೋಜನೆಯಡಿ ಯಾವ ಕಾಮಗಾರಿಗಳನ್ನು ನಿಯಮಾವಳಿ ರೀತಿ ಕೈಗೊಳ್ಳಲು ಸಾಧ್ಯವಿರುತ್ತದೆಯೊ ಅಂತಹ ಕಾಮಗಾರಿಗಳನ್ನು ನೀರು ಮತ್ತು ನೈರ್ಮಲ್ಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯಡಿ ತೆಗೆದುಕೊಳ್ಳಬಾರದು ಎಂದರು.
ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿ ಮಾಲೀಕರು ನೀರು ಪೂರೈಸಲು ಮುಂದಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ಈ ಟಾಸ್ಕ್ ಪೋರ್ಸ್ ಸಮಿತಿಯ ಅನುಮೋದನೆ ಪಡೆದು ತುರ್ತು ಸಂದರ್ಭಗಳಲ್ಲಿ ಮಾತ್ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 945 ನೀರು ಪೂರೈಸುವ ನೀರಿನ ಟ್ಯಾಂಕ್‌ಗಳು ಗ್ರಾಮೀಣ ಪ್ರದೇಶಗಳಲ್ಲಿ ಇವೆ. ಈ ನೀರು ಸಂಗ್ರಹಣ ತಾಣಗಳ ಸುತ್ತಮುತ್ತ ನೀರು ಸೋರಿಕೆಯಾಗಿ ಕೀಟ ಜನ್ಯ ಕಾಯಿಲೆಗಳಿಗೆ ಹಾಗೂ ಅನೈರ್ಮಲ್ಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ ಎಂದರು.
ಈ ನೀರು ಸಂಗ್ರಹಣ ಸಾರ್ವಜನಿಕ ಸ್ಥಳಗಳ ಸುತ್ತಮುತ್ತ ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆ ಮಾಡಿಸಬೇಕು. ಯಾವ ಟ್ಯಾಂಕ್ ಬಳಿ ನೀರು ಸೋರಿಕೆ ಆಗುತ್ತಿದೆ ಎಂಬ ವರದಿ ಪಡೆದು ದುರಸ್ತಿ ಕೈಗೊಳ್ಳಬೇಕು. ನೀರು ನಿಲ್ಲದಂತೆ ಕ್ರಮವಹಿಸಬೇಕು. ಇದರಿಂದ ಡೆಂಗಿ, ಚಿಕುನ್ ಗುನ್ಯಾ ಮತ್ತಿತರ ರೋಗಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು, ಕ್ರಮವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.