ನಿಖಿಲ್ ಕುಮಾರಸ್ವಾಮಿ
ಚಿಕ್ಕಬಳ್ಳಾಪುರ: ‘ದೇಶಕ್ಕೆ ನರೇಂದ್ರ ಮೋದಿ, ರಾಜ್ಯಕ್ಕೆ ಕುಮಾರಣ್ಣ ಅವರ ನಾಯಕತ್ವ ಎನ್ನುವ ಚರ್ಚೆ ನಾನು ಭೇಟಿ ನೀಡಿದ ಕಡೆಗಳಲ್ಲೆಲ್ಲ ಕೇಳಿ ಬರುತ್ತಿದೆ. ಇದು ಜೆಡಿಎಸ್ ಕಾರ್ಯಕರ್ತರ ಭಾವನೆಯಲ್ಲ. ರಾಜ್ಯದ ಎಲ್ಲ ಭಾಗಗಳಲ್ಲಿನ ಜನರ ಭಾವನೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಬುಧವಾರ ನಡೆದ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಹಳೆ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾದ ಪಕ್ಷವಲ್ಲ. ನಮ್ಮ ಪಕ್ಷದ ಶಾಸಕರಲ್ಲಿ ಶೇ 40ರಿಂದ 50ರಷ್ಟು ಮಂದಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಭಾಗಗಳಿಂದ ಆಯ್ಕೆ ಆಗುತ್ತಾರೆ. ಈ ಭಾಗಗಳಿಗೆ ನಾನು ನಿರಂತವಾಗಿ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಈ ಪ್ರವಾಸದಿಂದ ನಿಖಿಲ್, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಲು ವೇದಿಕೆ ಸಿದ್ಧವಾಗುತ್ತಿದೆ ಎನ್ನುವ ಮಾತುಗಳು ಕೇಳುತ್ತಿವೆ. ಆದರೆ ನನಗೆ ಆ ಆಸೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷ ಸಂಘಟನೆ ಆಗಬೇಕು. ಯಾವುದೇ ಕಾರಣಕ್ಕೂ ಜೆಡಿಎಸ್ ಅನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಗುಡುಗಿದರು.
ಪಕ್ಷದಿಂದ ಹೆಚ್ಚು ಶಾಸಕರು ಆಯ್ಕೆಯಾಗುತ್ತಿಲ್ಲ. ವಿಧಾನಸಭೆ ಚುನಾವಣೆ ಐದಾರು ತಿಂಗಳು ಇದೆ ಎನ್ನುವಾಗ ಎಚ್.ಡಿ. ಕುಮಾರಸ್ವಾಮಿ ಅವರು ನಾಲ್ಕು ಟ್ರಿಪ್ ಮಾಡಿದರೆ ಮತ ಹಾಕುತ್ತಾರೆ ಎನ್ನುವ ಭಾವನೆ ಇದೆ. ಆದರೆ ಆ ರೀತಿ ಆಗುವುದಿಲ್ಲ. ವಿಧಾನಸಭೆ ಚುನಾವಣೆಗೆ ಕೇವಲ1 ಸಾವಿರ ದಿನಗಳ ಮಾತ್ರ ಬಾಕಿ ಇವೆ. ಈಗಲೇ ಪಕ್ಷ ಸಂಘಟನೆ ಮಾಡಬೇಕು ಎಂದರು.
ಬಿಜೆಪಿ, ಜೆಡಿಎಸ್ ಮೈತ್ರಿ ಶಾಶ್ವತವಾಗಿ ಮುಂದುವರಿಯುತ್ತದೆ. ಇದರಲ್ಲಿ ಯಾರಿಗೂ ಅನುಮಾನವೇ ಬೇಡ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.