ADVERTISEMENT

ಕ್ಷೇತ್ರವಿಲ್ಲದೆ ರಾಜ್ಯದಲ್ಲೆಲ್ಲಾ ಓಡಾಡುತ್ತಿರುವ ಸಿದ್ದರಾಮಯ್ಯ: ಕುಮಾರಸ್ವಾಮಿ

‘ಸಿಪಿಎಂ ಜತೆ ಹೊಂದಾಣಿಕೆ; ಚರ್ಚೆ ನಡೆದಿಲ್ಲ’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 3:18 IST
Last Updated 3 ಫೆಬ್ರುವರಿ 2023, 3:18 IST
ಬಾಗೇಪಲ್ಲಿ ಪಟ್ಟಣಕ್ಕೆ ಗುರುವಾರ ಆಗಮಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪಕ್ಷದ ಅಭ್ಯರ್ಥಿ ಡಿ.ಜೆ. ನಾಗರಾಜರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ನರಸಿಂಹನಾಯ್ಡು, ಪುರಸಭೆ ಸದಸ್ಯೆ ಸುಜಾತಾ ನಾಯ್ಡು, ತಾಲ್ಲೂಕು ಅಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಸ್ವಾಗತಿಸಿದರು
ಬಾಗೇಪಲ್ಲಿ ಪಟ್ಟಣಕ್ಕೆ ಗುರುವಾರ ಆಗಮಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪಕ್ಷದ ಅಭ್ಯರ್ಥಿ ಡಿ.ಜೆ. ನಾಗರಾಜರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ನರಸಿಂಹನಾಯ್ಡು, ಪುರಸಭೆ ಸದಸ್ಯೆ ಸುಜಾತಾ ನಾಯ್ಡು, ತಾಲ್ಲೂಕು ಅಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಸ್ವಾಗತಿಸಿದರು   

ಬಾಗೇಪಲ್ಲಿ: ‘ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ಜೊತೆಗೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಅಂತಿಮವಾಗಿ ಜೆಡಿಎಸ್‌ ಅಭ್ಯರ್ಥಿಯಾಗಿ ಡಿ.ಜೆ. ನಾಗರಾಜರೆಡ್ಡಿ ಅವರೇ ಕಣಕ್ಕೆ ಇಳಿಯಲಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಗುರುವಾರ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಾಗೇಪಲ್ಲಿ ಕ್ಷೇತ್ರ ಸಂಬಂಧ ಯಾವ ರಾಜಕೀಯ ಪಕ್ಷದ ಜೊತೆಗೂ ಹೊಂದಾಣಿಕೆ ಕುರಿತು ಮಾತುಕತೆ ಮಾಡಿಲ್ಲ. ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ. ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ನಾಗರಾಜರೆಡ್ಡಿ ಅವರ ಹೆಸರು ಪ್ರಕಟಿಸಲಾಗಿದೆ. ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದರು.

ADVERTISEMENT

ನಾಗರಾಜರೆಡ್ಡಿ ಅವರು ಮೊದಲಿನಿಂದಲೂ ಈ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದಾರೆ. ಅವರಿಗೆ ಟಿಕೆಟ್ ನೀಡದೆ ಬೇರೆಯವರಿಗೆ ನೀಡುವುದಿಲ್ಲ. ತಮ್ಮ ಸ್ವಕ್ಷೇತ್ರ ಬಿಟ್ಟು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ನಮಗೇನೂ ಹುಚ್ಚು ಹಿಡಿದಿಲ್ಲ ಎಂದು ತಿಳಿಸಿದರು.

ಶಿವಲಿಂಗೇಗೌಡ ಸೇರಿದಂತೆ ಅನೇಕರು ಪಕ್ಷ ತೊರೆದರೆ ಜೆಡಿಎಸ್‌ಗೆ ನಷ್ಟವಿಲ್ಲ. ಸಿದ್ದರಾಮಯ್ಯ ಅವರು ಎಲ್ಲ ಕಡೆ ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುತ್ತದೆ ಎಂದು ಹೇಳಿದ್ದಾರೆ. ಅವರೇ ಸೋಲೆತ್ತಿನ ಬಾಲ ಹಿಡಿಯುವವರಾಗಿದ್ದಾರೆ. ಅವರಿಗೆ ಕ್ಷೇತ್ರ ಇಲ್ಲದೇ ರಾಜ್ಯದಲ್ಲೆಲ್ಲಾ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವವರು ಎಚ್ಚರಿಕೆಯಿಂದ ಮಾತನಾಡಬೇಕು. ನಾವು ಯಾರಿಗೂ ಏನೂ ಮೋಸ ಮಾಡಿಲ್ಲ. ದೇವೇಗೌಡರು ಮತ್ತು ಬೈರೇಗೌಡರು ಜೊತೆಯಲ್ಲಿ ರಾಜಕೀಯ ಮಾಡಿಕೊಂಡಿದ್ದವರು. ಕೃಷ್ಣಬೈರೇಗೌಡ ಅವರು ಹಿಂದಿನ ಇತಿಹಾಸ ತಿಳಿದು ಮಾತನಾಡಬೇಕು. ನಮ್ಮ ಜೊತೆ ಇದ್ದು ಅಧಿಕಾರ ಪಡೆದು, ನಾಯಕರೂ ಆಗಿ ನಮ್ಮ ಕುಟುಂಬಕ್ಕೆ ಎಲ್ಲರೂ ಚೂರಿ ಹಾಕಿದ್ದಾರೆ. ಎದುರಾಳಿ ಪಕ್ಷದ ರಾಜಕಾರಣಿಗಳು ನೀಚಮಟ್ಟದ ರಾಜಕೀಯ ಮಾಡಬಾರದು ಎಂದು ತಿಳಿಸಿದರು.

ಹೆಲಿಕಾಪ್ಟರ್‌ನಲ್ಲಿ ಬಂದ ಎಚ್‌ಡಿಕೆ: ಕೆಎಚ್‌ಬಿ ಕಾಲೊನಿಯಲ್ಲಿ ಕುಮಾರಸ್ವಾಮಿ ಆಗಮನಕ್ಕೆ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಪಕ್ಷದ ಮುಖಂಡ ಹರಿನಾಥ ರೆಡ್ಡಿ ಅವರ ಸಂಬಂಧಿಯ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಆಗಮಿಸಿದ್ದರು.

ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪುರ್, ಚಿಕ್ಕಬಳ್ಳಾಪುರದ ಜೆಡಿಎಸ್ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ವಿ. ಮುನೇಗೌಡ, ಪಕ್ಷದ ಅಭ್ಯರ್ಥಿ ಡಿ.ಜೆ. ನಾಗರಾಜರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಸಿ. ರಾಜಾಕಾಂತ್, ಹರಿನಾಥರೆಡ್ಡಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ನರಸಿಂಹನಾಯ್ಡು, ಪುರಸಭೆ ಸದಸ್ಯೆ ಸುಜಾತಾ ನಾಯ್ಡು, ಎಂ.ಎನ್. ರಾಜಾರಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.