
ಚಿಕ್ಕಬಳ್ಳಾಪುರ: ಪಕ್ಷ ಸಂಘಟನೆ ಮತ್ತು ಬಲವರ್ಧನೆ ದೃಷ್ಟಿಯಿಂದ ಜೆಡಿಎಸ್ ಪಕ್ಷವು ತನ್ನ ಕೋರ್ ಕಮಿಟಿಯನ್ನು ಪುನರ್ ರಚಿಸಿದೆ. ಶಿಸ್ತುಪಾಲನಾ ಸಮಿತಿ, ಪ್ರಚಾರ ಸಮಿತಿಗೂ ಅಧ್ಯಕ್ಷರು, ಸದಸ್ಯರನ್ನು ನೇಮಿಸಿದೆ.
ಜೆಡಿಎಸ್‌ಗೆ ತಳಮಟ್ಟದಿಂದ ಸಂಘಟನೆಯಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮುಖಂಡರನ್ನು ಈ ಸಮಿತಿಗಳಿಗೆ ನೇಮಿಸಲಾಗಿದೆ. ಈ ಮೂಲಕ ಅವಳಿ ಜಿಲ್ಲೆಗಳಲ್ಲಿ ಸಂಘಟನೆಗೆ ಪಕ್ಷವು ಹೆಜ್ಜೆ ಇಟ್ಟಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹಿರಿಯ ನಾಯಕ ಜಿ.ಟಿ ದೇವೇಗೌಡ ಕೋರ್ ಕಮಿಟಿ ಅಧ್ಯಕ್ಷರಾಗಿದ್ದರು. ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿರುವ ಪಕ್ಷವು ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಆದ ವಿಧಾನಸಭೆ ಮಾಜಿ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅವರಿಗೆ ಕೋರ್ ಕಮಿಟಿ ಅಧ್ಯಕ್ಷ ಸ್ಥಾನ ನೀಡಿದೆ.
ಎರಡು ಬಾರಿ ಚಿಂತಾಮಣಿ ಶಾಸಕರಾಗಿದ್ದ ಕೃಷ್ಣಾರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಜೆಡಿಎಸ್‌ನ ಅಗ್ರ ನಾಯಕ ಎನಿಸಿದ್ದಾರೆ. ರಾಜ್ಯವಷ್ಟೇ ಅಲ್ಲ ಅವಳಿ ಜಿಲ್ಲೆಗಳಲ್ಲಿ ಪಕ್ಷ ಸಂಘಟಿಸುವ ಪ್ರಮುಖ ಹೊಣೆಗಾರಿಕೆ ಈಗ ಕೃಷ್ಣಾರೆಡ್ಡಿ ಅವರ ಮೇಲಿದೆ.
ಕೋರ್ ಕಮಿಟಿಗೆ ಕೋಲಾರ ಸಂಸದ ಎಂ.ಮಲ್ಲೇಶ್ ಬಾಬು ಮತ್ತು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಸದಸ್ಯರಾಗಿದ್ದಾರೆ. ಜೆಡಿಎಸ್ ರಾಜ್ಯದಲ್ಲಿ ಗೆಲುವು ಸಾಧಿಸಿರುವ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಕೋಲಾರವೂ ಒಂದು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರವೂ ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಕ್ಕಲಿಗರು ಮತ್ತು ಪರಿಶಿಷ್ಟ ಜಾತಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ರಾಜಕೀಯದಲ್ಲಿ ನಿರ್ಣಾಯಕರಾಗಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾಗಿದೆ. ಮುಳಬಾಗಿಲು ವಿಧಾನಸಭಾ ಕ್ಷೇತ್ರ ಸಹ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಇಲ್ಲಿನ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸಹ ಕೋರ್ ಕಮಿಟಿ ಸದಸ್ಯರಾಗಿದ್ದಾರೆ.
ಶಿಸ್ತುಪಾಲನಾ ಸಮಿತಿ ಸದಸ್ಯರಾಗಿ ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೋಲಾರದ ಗೋವಿಂದರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಚೌಡರೆಡ್ಡಿ ಅವರನ್ನು ಪಕ್ಷವು ನೇಮಿಸಿದೆ.
ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ತಳಹಂತದಿಂದಲೂ ಕಾರ್ಯಕರ್ತರ ಪಡೆ ಇದೆ. ಅದರಲ್ಲಿಯೂ ಬಯಲು ಸೀಮೆಯ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ಗೆ ತನ್ನದೇ ಆದ ನೆಲೆಗಟ್ಟಿದೆ.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ದೇವೇಗೌಡರ ಬೆಂಬಲಿತ 11 ಮಂದಿ ಶಾಸಕರು ಈ ಹಿಂದೆ ಆಯ್ಕೆ ಆಗಿದ್ದ ಇತಿಹಾಸವಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷಕ್ಕೆ ಇರುವ ಬಲ ಮನಗಂಡೇ ಎಚ್.ಡಿ.ಕುಮಾರಸ್ವಾಮಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿಂದ ಕಣಕ್ಕೆ ಇಳಿದಿದ್ದರು. 3,46,339 (ಶೇ 27.4) ಮತಗಳನ್ನು ಪಡೆದಿದ್ದರು.
ಪಕ್ಷಕ್ಕೆ ಉತ್ತಮ ನೆಲೆ ಇರುವ ಈ ಜಿಲ್ಲೆಗಳಲ್ಲಿ ಜೆಡಿಎಸ್ ಪುನರ್ ಸಂಘಟಿಸುವ ದೃಷ್ಟಿಯಿಂದ ನಾಯಕರಿಗೆ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸುತ್ತವೆ.
ಚಿಂತಾಮಣಿ ಮಾಜಿ ಶಾಸಕ ಕೃಷ್ಣಾರೆಡ್ಡಿ ಕೋರ್ ಕಮಿಟಿ ಅಧ್ಯಕ್ಷ | ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್‌ಗಿದೆ ತಳಮಟ್ಟದ ನೆಲೆ | ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್‌ಡಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.