ADVERTISEMENT

ಶಿಡ್ಲಘಟ್ಟ | ನೌಕರಿ ಕೊಡಿಸುವ ಸೋಗಿನಲ್ಲಿ ₹21 ಲಕ್ಷ ವಂಚನೆ: ಬಂಧನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:42 IST
Last Updated 16 ಸೆಪ್ಟೆಂಬರ್ 2025, 4:42 IST
<div class="paragraphs"><p>ಬಂಧನ </p></div>

ಬಂಧನ

   

ಶಿಡ್ಲಘಟ್ಟ: ತಾನು ಕೆಪಿಎಸ್‌ಸಿಯ ಪ್ರಮುಖ ಹುದ್ದೆಯಲ್ಲಿದ್ದು, ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ, ₹21.36 ಲಕ್ಷ ವಂಚನೆ ಮಾಡಿದ್ದ ಆರೋಪದ ಮೇರೆಗೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು, ವ್ಯಕ್ತಿಯೊಬ್ಬನನ್ನು ಸೋಮವಾರ ಬಂಧಿಸಿದ್ದಾರೆ. 

ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿಯ ತೋಕಲಘಟ್ಟ ಗ್ರಾಮದ ನಿವಾಸಿ ಅನಿಲ್ ಕುಮಾರ್ ಬಂಧಿತ ಆರೋಪಿ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ತಾಲ್ಲೂಕಿನ ಜಂಗಮಕೋಟೆ ನಿವಾಸಿ ಗೋಪಾಲಕೃಷ್ಣ ಅವರಿಗೆ ಅನಿಲ್ ಕುಮಾರ್ ಪರಿಚಯವಾಗಿದ್ದು, ‘ನಾನು ಕೆಪಿಎಸ್‌ಸಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದೇನೆ. ನಿಮ್ಮ ಮಗನಿಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆ’ ಎಂದು ಗೋಪಾಲ ಕೃಷ್ಣ ಅವರಿಗೆ ಆರೋಪಿ ನಂಬಿಸಿದ್ದಾನೆ. ಇದನ್ನು ನಂಬಿದ ಗೋಪಾಲಕೃಷ್ಣ ಆರೋಪಿ ಅನಿಲ್ ಕುಮಾರ್ ಹೇಳುವ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟಾರೆ ₹21,36,000 ಹಣ ಜಮೆ ಮಾಡಿದ್ದಾರೆ
ಎಂದು ಪೊಲೀಸರು
ತಿಳಿಸಿದ್ದಾರೆ. 

ಹಣ ಪಡೆದು ಹಲವು ದಿನ, ತಿಂಗಳು ಕಳೆದರೂ, ತನ್ನ ಮಗನಿಗೆ ಸರ್ಕಾರಿ ನೌಕರಿ ಸಿಗದಿದ್ದರಿಂದ ಅನುಮಾನಗೊಂಡ ಗೋಪಾಲಕೃಷ್ಣ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರು ಆರೋಪಿಯನ್ನು ಹೊಸಕೋಟೆ ತಾಲ್ಲೂಕು ಮಲ್ಲಿಮಾಕನಹಳ್ಳಿ ಬಳಿ ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಿದಾಗ, ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಪಡೆದ ಹಣವನ್ನು ಆನ್‌ಲೈನ್ ಬೆಟ್ಟಿಂಗ್ ಆಡಿ, ಕಲೆದುಕೊಂಡಿದ್ದೇನೆ ಎಂದು ಆರೋಪಿ ಅನಿಲ್ ಕುಮಾರ್ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಸ್ಐ ಐ.ಕೆ. ಸತೀಶ್, ಸಿಬ್ಬಂದಿ ಸಂದೀಪ್ ಕುಮಾರ್, ವೆಂಕಟೇಶ್, ಮಂಜುನಾಥ್ ಅವರನ್ನು ಎಸ್‌ಪಿ ಕುಶಾಲ್ ಚೌಕ್ಸೆ
ಪ್ರಶಂಸಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.