ADVERTISEMENT

ರಾಜಕೀಯ ಪ್ರಜ್ಞೆ ಮೂಡಿಸಿದ ಕಾನ್ಶಿರಾಂ

ಬಿಎಸ್ಪಿ ಜಿಲ್ಲಾ ಘಟಕ ವತಿಯಿಂದ ನಗರದಲ್ಲಿ ‘ಬಿಎಸ್ಪಿ ನಡಿಗೆ ಒಬಿಸಿ ಅಲ್ಪಸಂಖ್ಯಾತರ ಕಡೆಗೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 12:03 IST
Last Updated 9 ಅಕ್ಟೋಬರ್ 2019, 12:03 IST
ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಘಟಕದ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಅವರು ಕಾನ್ಶಿರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಘಟಕದ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಅವರು ಕಾನ್ಶಿರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ‘ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸ್ಥಾಪಕ ದಾದಾ ಸಾಹೇಬ್‌ ಕಾನ್ಶಿರಾಂ ಅವರು ಬಿ.ಆರ್‌.ಅಂಬೇಡ್ಕರ್‌ ಅವರ ಆಶಯ, ಹೋರಾಟಗಳನ್ನು ಯಥಾವತ್ತಾಗಿ ಅಳವಡಿಸಿಕೊಂಡು ದೇಶದ ಮೂಲ ನಿವಾಸಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿದರು’ ಎಂದು ಬಿಎಸ್ಪಿ ರಾಜ್ಯ ಘಟಕದ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಬಿಎಸ್ಪಿ ಜಿಲ್ಲಾ ಘಟಕ ವತಿಯಿಂದ ಕಾನ್ಶಿರಾಂ ಅವರ 13ನೇ ವರ್ಷದ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ‘ಬಿಎಸ್ಪಿ ನಡಿಗೆ ಒಬಿಸಿ ಅಲ್ಪಸಂಖ್ಯಾತರ ಕಡೆಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಬಹುಸಂಖ್ಯಾರತಾಗಿರುವ ದಲಿತರ ಉದ್ದಾರ ಯಾವುದೇ ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ ಎಂದು ಅರಿತ ಅಂಬೇಡ್ಕರ್ ಅವರು ಸತತ ಹೋರಾಟಗಳ ಮೂಲಕ ದಲಿತರಿಗೆ ಮತದಾನದ ಹಕ್ಕು ನೀಡಿದ್ದಾರೆ. ಆ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈವರೆಗೆ ಮೇಲ್ವರ್ಗದವರ ಉದ್ದಾರಕ್ಕಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳು ಸಂವಿಧಾನ ಜಾರಿಗೆ ಮುಂದಾಗಿಲ್ಲ. ಆದ್ದರಿಂದ ಮತದಾರರು ಬಿಎಸ್ಪಿಗೆ ಮತ ನೀಡಲು ಸಂಕಲ್ಪ ಮಾಡಬೇಕು’ ಎಂದರು.

ADVERTISEMENT

‘ಕಾನ್ಶಿರಾಂ ಅವರು ಸಾವಿರಾರು ಕೀಲೋಮೀಟರ್ ಸೈಕಲ್ ತುಳಿದು ಕಟ್ಟಿರುವ ಬಿಎಸ್ಪಿ ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ದೇಶದ ರಾಷ್ಟ್ರೀಯ ಪಕ್ಷಗಳ ಸಾಲಿನಲ್ಲಿ ಬಿಎಸ್ಪಿ ಮೂರನೇ ಸ್ಥಾನದಲ್ಲಿದೆ. ಅದನ್ನು ಮೊದಲನೇ ಸ್ಥಾನಕ್ಕೆ ತರಲು ಬಹುಜನರು ಶ್ರಮಿಸಬೇಕು’ ಎಂದರು.

ಬಿಎಸ್ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಆರ್.ನಾರಾಯಣಸ್ವಾಮಿ ಮಾತನಾಡಿ, ‘ಬಿಎಸ್ಪಿಯನ್ನು ದೇಶದಲ್ಲಿ ದೊಡ್ಡ ಪಕ್ಷವಾಗಿ ಕಟ್ಟಿ ಬೆಳೆಸಬೇಕಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು 2007 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಕುಟುಂಬಕ್ಕೆ ತಲಾ ನಾಲ್ಕು ಎಕರೆಯಂತೆ 30 ಲಕ್ಷ ಬಡ ಕುಟುಂಬಗಳಿಗೆ 1.70 ಕೋಟಿ ಎಕರೆ ಭೂಮಿ ಹಂಚುವ ಮೂಲಕ ನಿಜವಾದ ಸಂವಿಧಾನ ಜಾರಿ ಮಾಡಿದ್ದರು’ ಎಂದು ಹೇಳಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ದಶಕ ಕಳೆದರೂ ಅಭಿವೃದ್ಧಿ ಆಗಿಲ್ಲ. ಬಡತನ, ನಿರುದ್ಯೋಗ ಸಮಸ್ಯೆ ತಾಂಡವಾಡುವಾಡುತ್ತಿದೆ. ಶ್ರೀಮಂತರು ಶ್ರೀಮಂತರಾಗಿ, ಬಡವರು ಇನ್ನೂ ಬಡವರಾಗುತ್ತಿದ್ದಾರೆ. ಬಡವರು, ರೈತರ ಉದ್ದಾರ ಆಗಿಲ್ಲ. ಬದಲು ಶ್ರೀಮಂತರ ಆಸ್ತಿ ದುಪ್ಪಟ್ಟು ಹೆಚ್ಚಾಗಿದೆ. ಕೃಷಿ ಉತ್ಪನ್ನಗಳ ಬೆಲೆ ಕುಸಿದು ರೈತರು ಸಾಲಗಾರರಾಗಿ ಕೂಲಿ ಕಾರ್ಮಿಕರಾಗಿ ವಲಸೆ ಹೋಗುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಬಿಎಸ್ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಪಿ.ವಿ.ನಾಗಪ್ಪ, ನಂದಗುಂದ ವೆಂಕಟೇಶ್, ಜಿಲ್ಲಾ ಘಟಕದ ಅಧ್ಯಕ್ಷ ಅಪ್ಸರ್ ಪಾಷಾ, ಉಪಾಧ್ಯಕ್ಷರಾದ ಬಾಗೇಪಲ್ಲಿ ವೆಂಕಟೇಶ್, ದೇವಪ್ಪ, ಸಂಯೋಜಕ ಎಂ.ಮುನಿಕೃಷ್ಣಯ್ಯ, ಕಾರ್ಯದರ್ಶಿ ಕೆ. ಮೂರ್ತಿ, ಮಹಿಳಾ ಘಟಕದ ಜಿಲ್ಲಾ ಘಟಕದ ಕಾರ್ಯದರ್ಶಿ ಶಶಿಕಲಾ, ಮುಖಂಡರಾದ ಡಿ.ಆರ್.ಬಾಲರಾಜ್, ಪೈಯಾಜ್ ಅಹಮ್ಮದ್, ಗುರ್ರಯ್ಯ, ಪಿ. ಶ್ರೀನಿವಾಸ್, ದೇವರಾಜ್, ಉಸ್ಮಾನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.