ಬಾಗೇಪಲ್ಲಿ: ‘ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಪುನಾರಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡುವ ವಿಶ್ವಾಸ ಇದೆ’ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಲವಾರಿಪಲ್ಲಿ ಶುಕ್ರವಾರ ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನಿರ್ವಹಿಸಿ ಮಾತನಾಡಿದರು.
ಇದುವರೆಗೆ ಶಿಡ್ಲಘಟ್ಟದಲ್ಲಿ ವಿ.ಮುನಿಯಪ್ಪ, ಗೌರಿಬಿದನೂರಿನಲ್ಲಿ ಎಚ್.ಎನ್.ಶಿವಶಂಕರರೆಡ್ಡಿ, ಚಿಕ್ಕಬಳ್ಳಾಪುರದಲ್ಲಿ ಕೆ.ಸುಧಾಕರ್, ಚಿಂತಾಮಣಿಯಲ್ಲಿ ಡಾ.ಎಂ.ಸಿ.ಸುಧಾಕರ್ ಸಚಿವರಾಗಿದ್ದರು. ಅವರವರ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿಲ್ಲ. ನಾನು 3 ಬಾರಿ ಶಾಸಕನಾಗಿದ್ದೇನೆ. 450ಕ್ಕೂ ಹೆಚ್ಚು ಗ್ರಾಮಗಳು ಇವೆ. ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಮನೆ, ನಿವೇಶನ, ಸಾಗುವಳಿ ಚೀಟಿ ವಿತರಣೆ ಮಾಡಬೇಕಾಗಿದೆ ಎಂದರು.
ಶಾಶ್ವತವಾದ ಕುಡಿಯುವ ನೀರು ಇಲ್ಲ. ಕೈಗಾರಿಕೆ ಆಗಿಲ್ಲ. ಕೃಷಿಕರಿಗೆ ನೀರು ಸಿಗುತ್ತಿಲ್ಲ. ಕೃಷಿ, ತರಕಾರಿ ಬೆಳೆಗಳನ್ನು ಬೆಳೆಯಲು ಆಗುತ್ತಿಲ್ಲ. ನಿರುದ್ಯೋಗದಿಂದ ಯುವಜನರು ಪೋಷಕರನ್ನು ಮನೆಯಲ್ಲಿ ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಕ್ಷೇತ್ರದಲ್ಲಿ ಶಾಶ್ವತ ಕಾಮಗಾರಿ ಆಗಬೇಕಾಗಿದೆ. ಅನ್ಯ ತಾಲ್ಲೂಕುಗಳಲ್ಲಿ ನೀರು, ಕೈಗಾರಿಕೆ ಮಾಡಿದ್ದಾರೆ. ಈ ಬಾರಿಯ ಸಚಿವ ಸಂಪುಟದ ಪುನರಚನೆಯಲ್ಲಿ ಅವಕಾಶ ಕೊಡಿ. ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನಮಾನ ನೀಡುವ ವಿಶ್ವಾಸ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.