ADVERTISEMENT

ಚಿಕ್ಕಬಳ್ಳಾಪುರ |ಬೀಜ ನಿಗಮದ ಅಧ್ಯಕ್ಷ ಸ್ಥಾನ: ಆಂಜನಪ್ಪ ’ಕೈ’ ಬಿಟ್ಟ ಮುಖ್ಯಮಂತ್ರಿ

ಚಿಕ್ಕಬಳ್ಳಾಪುರ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಲ್ಲಿ ನಾನಾ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 2:17 IST
Last Updated 27 ಸೆಪ್ಟೆಂಬರ್ 2025, 2:17 IST
ನಂದಿ ಆಂಜನಪ್ಪ
ನಂದಿ ಆಂಜನಪ್ಪ   

ಚಿಕ್ಕಬಳ್ಳಾಪುರ: ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಅವರು ಬುಧವಾರ ಪ್ರಕಟಿಸಿದ ಪಟ್ಟಿಯಲ್ಲಿ ಕರ್ನಾಟಕ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನರಾಗಿ ನೇಮಕವಾಗಿದ್ದ ಮುಖಂಡ ನಂದಿ ಆಂಜನಪ್ಪ ಅವರ ಹೆಸರನ್ನು ಈಗ ಕೈಬಿಡಲಾಗಿದೆ. 

ಇದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದೊಳಗಿನ ಬಣ ರಾಜಕಾರಣದಿಂದಾಗಿಯೇ ನಂದಿ ಆಂಜನಪ್ಪ ಅವರ ಹೆಸರನ್ನು ಕೈ ಬಿಡಲಾಗಿದೆಯೇ ಅಥವಾ ಯಾವ ಕಾರಣದಿಂದ ಅವರ ಹೆಸರು ಪಟ್ಟಿಯಲ್ಲಿ ಇಲ್ಲ ಎನ್ನುವ ಚರ್ಚೆ ಪಕ್ಷದ ವಲಯದಲ್ಲಿ ನಡೆಯುತ್ತಿದೆ. 

ಐಎಸಿಸಿ ಅಧ್ಯಕ್ಷರು ಅನುಮೋದಿಸಿದ ಪಟ್ಟಿಯಲ್ಲಿ ನಂದಿ ಆಂಜನಪ್ಪ ಹೆಸರು ಇತ್ತು. ಆದರೆ ಶುಕ್ರವಾರ ಮುಖ್ಯಮಂತ್ರಿ ಆದೇಶಿಸಿರುವ ‍ಪಟ್ಟಿಯಿಂದ ಆಂಜನಪ್ಪ ಹೆಸರು ಕೈ ಬಿಡಲಾಗಿದೆ. 

ADVERTISEMENT

ನಂದಿ ಆಂಜನಪ್ಪ ಅಥವಾ ಅಕ್ಕಿ ಆಂಜನಪ್ಪ ಎಂದೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಆಂಜನಪ್ಪ 2019ರ ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದವರು. ಅವರಿಗೆ 2013ರ ವಿಧಾನಸಭಾ ಚುನಾವಣೆಯಲ್ಲಿಯೇ ವಿಧಾನಸಭೆ ಚುನಾವಣೆಯ ಟಿಕೆಟ್ ದೊರೆಯಬೇಕಾಗಿತ್ತು. ಆದರೆ ಅಂದು ಡಾ.ಕೆ.ಸುಧಾಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ನಂತರ 2019ರಲ್ಲಿ ಡಾ.ಕೆ.ಸುಧಾಕರ್ ಕಾಂಗ್ರೆಸ್ ತೊರೆದ ನಂತರ ನಂದಿ ಆಂಜನಪ್ಪ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಆದರೆ ಅವರು ಪರಾಭವಗೊಂಡರು.

ಆಂಜನಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ನಂತರ ಪ್ರದೀಪ್ ಈಶ್ವರ್ ಅವರನ್ನು ಒಮ್ಮತದಿಂದ ಅಭ್ಯರ್ಥಿಯನ್ನಾಗಿ ಮಾಡಿದರು.

ಸದಸ್ಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿವೆ. ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಒಂದು ಬಣವಾದರೆ ಮತ್ತು ನಂದಿ ಆಂಜನಪ್ಪ ಸೇರಿದಂತೆ ಹಲವು ನಾಯಕರು ಇವರ ವಿರೋಧಿ ಬಣದಲ್ಲಿ ಇದ್ದಾರೆ. 

ಪ್ರದೀಪ್ ಈಶ್ವರ್ ಗೆಲುವಿನ ನಂತರ ನಂದಿ ಆಂಜನಪ್ಪ ಮತ್ತು ‍ಪ್ರದೀಪ್ ಈಶ್ವರ್ ನಡುವೆ ವೈಮನಸ್ಸು ಹೆಚ್ಚುತ್ತಲೇ ಇದೆ. ಪರಸ್ಪರ ಆರೋಪ, ಪ್ರತ್ಯಾರೋಪ, ಟೀಕೆಗಳು ಬಹಿರಂಗವಾಗಿಯೇ ನಡೆಯುತ್ತಿವೆ. ಆಂಜನಪ್ಪ ಅವರ ನೇತೃತ್ವದಲ್ಲಿಯೇ ಕೆಪಿಸಿಸಿ ಅಧ್ಯಕ್ಷರಿಗೆ ಶಾಸಕರ ವಿರುದ್ಧ ದೂರು ಸಹ ನೀಡಲಾಗಿತ್ತು.  

ಈ ಬೆಳವಣಿಗೆಗಳೇ ನಂದಿ ಆಂಜನಪ್ಪ ಅವರ ಹೆಸರು ಕೈ ಬಿಡಲು ಮುಖ್ಯ ಕಾರಣವೇ ಎನ್ನುವ ಚರ್ಚೆಯೂ ನಡೆದಿದೆ.  

ಖರ್ಗೆ ಅವರಿಂದ ಅನುಮೋದನೆ ಪಟ್ಟಿದ್ದ ಪಟ್ಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ಸಲ್ಲಿಸಿದ್ದರು. ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಟ್ಟಿ ರವಾನಿಸಿದ್ದರು. ಖರ್ಗೆ ಅವರಿಂದ ಅನುಮೋದನೆ ಪಡೆದ ಪಟ್ಟಿಯನ್ನು ಕೆ.ಸಿ. ವೇಣುಗೋಪಾಲ್‌ ಅವರು ಮುಖ್ಯಮಂತ್ರಿಗೆ ರವಾನಿಸಿದ್ದರು. ಮುಖ್ಯಮಂತ್ರಿ ಅವರು ಈ ಪಟ್ಟಿ ಅನುಮೋದಿಸಿದ್ದಾರೆ.  ಆದರೆ ಬೀಜ ನಿಗಮದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊರಬೇಕಾಗಿದ್ದ ನಂದಿ ಆಂಜನಪ್ಪ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.