ರೈತರೊಂದಿಗೆ ವಿಶೇಷ ಭೂಸ್ವಾಧೀನಾಧಿಕಾರಿ ಹರಿಶಿಲ್ಪಾ ಅವರು ಮಾತುಕತೆ ನಡೆಸಿದರು
ಶಿಡ್ಲಘಟ್ಟ: ಪೊಲೀಸ್ ಭದ್ರತೆಯಲ್ಲಿ ಜಂಗಮಕೋಟೆ ಹೋಬಳಿಗೆ ಜಮೀನು ಪರಿಶೀಲನೆಗೆ ತೆರಳಿದ್ದ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಹರಿಶಿಲ್ಪಾ ನೇತೃತ್ವದ ಅಧಿಕಾರಿಗಳ ತಂಡ ಕೆಲವು ಕಡೆಗಳಲ್ಲಿ ಗ್ರಾಮಸ್ಥರು ಹಾಗೂ ರೈತರ ಆಕ್ರೋಶದ ಬಿಸಿ ಎದುರಿಸಬೇಕಾಯಿತು.
ಬಸವಾಪಟ್ಟಣ ಗ್ರಾಮದ ಜಮೀನುಗಳಿಗೆ ತೆರಳಿದ ಅಧಿಕಾರಿಗಳ ತಂಡವನ್ನು ‘ನಮ್ಮ ಅನುಮತಿಯಿಲ್ಲದೆ ಜಮೀನಿಗೆ ಕಾಲಿಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ನಾವು ಭೂಮಿ ಕೊಡುವುದಿಲ್ಲ. ಮರಳಿ ಹೋಗಿ ಎಂದು ಪ್ರತಿರೋಧ ಒಡ್ಡಿದರು.
‘ಭೂಸ್ವಾಧೀನ ಉದ್ದೇಶದಿಂದ ನಾವು ಇಲ್ಲಿಗೆ ಬಂದಿಲ್ಲ. ಕೆಲವು ರೈತರು ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಈ ಜಮೀನಿನಲ್ಲಿ ಏನು ಬೆಳೆ ಬೆಳೆಯಲಾಗುತ್ತದೆ ಎಂದು ನಾನೇ ಖುದ್ದಾಗಿ ಭೇಟಿ ನೀಡಿ ವರದಿ ಸಲ್ಲಿಸಬೇಕಾಗಿದೆ. ಕಚೇರಿಯಲ್ಲಿ ಕುಳಿತು ವರದಿ ನೀಡಲು ಸಾಧ್ಯವಿಲ್ಲ. ಹಾಗಾಗಿ ನಾನೇ ಖುದ್ದಾಗಿ ಅಧಿಕಾರಿಗಳ ಜತೆ ಬಂದಿದ್ದೇನೆ’ ಎಂದು ಭೂಸ್ವಾಧೀನ ಅಧಿಕಾರಿ ಹರಿಶಿಲ್ಪಾ ಸಮಜಾಯಿಷಿ ನೀಡಿದರು.
‘ರೈತರ ಒಪ್ಪಿಗೆ ಇಲ್ಲದೆ ಯಾವುದೇ ಜಮೀನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ. ಯಾವ ರೈತರಿಗೆ ಭೂಮಿ ಬಿಟ್ಟು ಕೊಡಲು ಇಷ್ಟವಿದೆಯೋ ಅಂಥವರ ಭೂಮಿಯನ್ನಷ್ಟೇ ಸ್ವಾಧೀನಪಡಿಸಿಕೊಳ್ಳುತ್ತೇವೆ’ ಎಂದು ಮನವರಿಕೆ ಮಾಡಲು ಯತ್ನಿಸಿದರು.
ಸಮಜಾಯಿಷಿಗೆ ಮಣಿಯದ ರೈತರು: ಇದರಿಂದ ಮತ್ತಷ್ಟು ಕೆರಳಿದ ರೈತರು, ‘ಭೂಮಿಯಲ್ಲಿ ಏನೆಲ್ಲಾ ಬೆಳೆ ಬೆಳೆಯುತ್ತಿದೆ ಎಂದು ಪಹಣಿಯಲ್ಲಿ ನಮೂದಾಗಿರುತ್ತದೆ. ಕಂದಾಯ ಇಲಾಖೆ ಬಳಿ ಈ ಮಾಹಿತಿ ಲಭ್ಯವಿಲ್ಲವೇ? ಬೇಕಾದರೆ ಅಲ್ಲಿಂದ ತರಿಸಿಕೊಳ್ಳಿ. ಅದನ್ನು ಬಿಟ್ಟು ರೈತರಿಗೆ ಮಾಹಿತಿ ನೀಡದೆ ಏಕಾಏಕಾಕಿ ಹೊಲಗಳಿಗೆ ನುಗ್ಗಿದರೆ ಹೇಗೆ? ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ’ ಎಂದು ತರಾಟೆಗೆ ತೆಗೆದುಕೊಂಡರು.
ಆಗ, ‘ಸೂಕ್ತ ಬೆಲೆ ನೀಡಿದರೆ ಭೂಮಿ ಕೊಡಲು ನಾವು ಸಿದ್ಧ’ ಎಂದು ಮತ್ತೊಂದು ಗುಂಪಿನ ರೈತರು ಘೋಷಿಸಿದರು. ಇದು ಭೂಸ್ವಾಧೀನ ವಿರೋಧಿ ರೈತರನ್ನು ಕೆರಳಿಸಿತು. ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ಶುರುವಾಯಿತು. ಕೈ, ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತಲೇ ಪೊಲೀಸರು, ಅಧಿಕಾರಿಗಳನ್ನು ವಾಹನಗಳಿಗೆ ಹತ್ತಿಸಿ ಕರೆದೊಯ್ದರು.
ರೈತರ ಈ ಪ್ರತಿರೋಧದ ಹೊರತಾಗಿಯೂ ಅಧಿಕಾರಿಗಳ ತಂಡ ಹೋಬಳಿಯ ದೇವಗಾನಹಳ್ಳಿ, ಗೊಲ್ಲಹಳ್ಳಿ, ಕೊಲುಮೆ ಹೊಸೂರು, ಬಸವಾಪಟ್ಟಣ, ನಡಿಪಿನಾಯಕನಹಳ್ಳಿ, ಯಣ್ಣಂಗೂರು, ಅರಿಕೆರೆ, ಸಂಜೀವಪುರ, ಹೊಸಪೇಟೆ, ಎದ್ದಲತಿಪ್ಪೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಜಮೀನುಗಳನ್ನು ಪರಿಶೀಲಿಸಿತು.
ರೈತರ ಜಮೀನುಗಳಲ್ಲಿ ಏನೆಲ್ಲಾ ಬೆಳೆದಿದ್ದಾರೆ. ಭೂಮಿ ಫಲವತ್ತಾದ ಹಾಗೂ ನೀರಾವರಿ ಭೂಮಿ ಹೌದೋ ಅಲ್ಲವೋ ಎನ್ನುವ ಮಾಹಿತಿಗಾಗಿ ಮಾತ್ರ ಬಂದಿದ್ದೇವೆ. ಬಲವಂತವಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ರೈತರು ಆತಂಕಕ್ಕೆ ಒಳಗಾಗಬಾರದು
ಹರಿಶಿಲ್ಪಾ ವಿಶೇಷ ಭೂಸ್ವಾಧೀನಾಧಿಕಾರಿ ಕೆಐಎಡಿಬಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.