
ವಿಜಯಪುರ (ದೇವನಹಳ್ಳಿ): ಪಟ್ಟಣದ ಸಮೀಪದ ಕೊಮ್ಮಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಸಹಕಾರ ಹಾಲು ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಅಧಿಕ ಹಾಲು ಕರೆಯುವ ಸ್ಪರ್ಧೆ, ಹಸು, ಕರುಗಳ ಪ್ರದರ್ಶನ ಮತ್ತು ರಂಗೋಲಿ ಸ್ಪರ್ಧೆಯನ್ನು ಮಂಗಳವಾರ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಎಸ್.ಪಿ. ಮುನಿರಾಜು ಮಾತನಾಡಿ, ರೈತರು ಗುಣಮಟ್ಟದ ಹಾಲನ್ನು ಡೇರಿಗೆ ಪೂರೈಸುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಹೈನೋದ್ಯಮವು ರೈತರಿಗೆ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಲಿದೆ. ಹೀಗಾಗಿ, ಹೈನುಗಾರಿಕೆಗೆ ರೈತರು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಕೃಷಿಯಲ್ಲಿ ನಿಶ್ಚಿತ ಆದಾಯ ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ, ಹೈನುಗಾರಿಕೆಯಲ್ಲಿ ಸ್ಪಷ್ಟವಾದ ನಿಯಮಗಳನ್ನು ಅನುಸರಿಸಿದರೆ ಉತ್ತಮ ಲಾಭ ಗಳಿಸಬಹುದು. ಹೈನುಗಾರರು ಒಕ್ಕೂಟದಿಂದ ಸಿಗುವ ಸವಲತ್ತುಗಳಾದ ರಾಸು ವಿಮೆ, ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಸರ್ಕಾರ ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಸರ್ಕಾರದ ಪ್ರೋತ್ಸಾಹವನ್ನು ರೈತರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಾಲ್ಲೂಕು ಪಶುಸಂಗೋಪನಾ ಅಧಿಕಾರಿ ನಾರಾಯಣಸ್ವಾಮಿ ತಿಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹೈನುಗಾರರಿಗೆ ನಗದು ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.
ಹಾಲು ಉತ್ಪಾದಕ ಸಂಘದ ಅಧ್ಯಕ್ಷ ರಾಮಾಜಿನಯ್ಯ, ಉಪಾಧ್ಯಕ್ಷ ಬಚ್ಚಣ್ಣ, ಎನ್.ಲಕ್ಷ್ಮಣ್, ಸಿ.ಕೆ.ನಾಗರಾಜ್, ಸುರೇಶ್, ಸಿ.ಎಂ.ಚಿಕ್ಕನಾಗಣ್ಣ, ರಮೇಶ್, ಡಿ.ಕೃಷ್ಣಪ್ಪ, ಭಾಗ್ಯಮ್ಮ, ವರಲಕ್ಷ್ಮಿ, ರೂಪಾ, ರೇಣುಕಮ್ಮ, ಜಯರಾಮ್, ಚೇತನ್, ಹೇಮನಾರಾಯಣರೆಡ್ಡಿ, ಪಶು ವೈದ್ಯಾಧಿಕಾರಿ ವಿನೋದ್, ಪಶು ವೈದ್ಯ ಡಾ.ರಾಜು, ರಾಜಪ್ಪ, ಡಾ.ಜಯಮಾಲ, ಡಾ.ವನಿತಾ, ಶೃತಿ, ಡಾ.ಸುಪ್ರಿಯಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.