ADVERTISEMENT

ಚಿಕ್ಕಬಳ್ಳಾಪುರ: ಡಿ.ಸಿ ಕಚೇರಿ ಬಳಿ ಕೆಪಿಆರ್‌ಎಸ್ ಪ್ರತಿಭಟನೆ

ಕೃಷಿ ಇಲಾಖೆಯೊಂದಿಗೆ ರೇಷ್ಮೆ, ತೋಟಗಾರಿಕೆ ವಿಲೀನಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:23 IST
Last Updated 26 ನವೆಂಬರ್ 2022, 4:23 IST
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ‍ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ‍ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು   

ಚಿಕ್ಕಬಳ್ಳಾಪುರ: ಕೃಷಿ ಇಲಾಖೆಯೊಂದಿಗೆ ರೇಷ್ಮೆ ಮತ್ತು ತೋಟಗಾರಿಕೆ ವಿಲೀನ ವಿರೋಧಿಸಿ, ಖಾಲಿ ಇರುವ 2,246 ಹುದ್ದೆಗಳನ್ನು ಭರ್ತಿಗೆ ಒತ್ತಾಯಿಸಿ ಮತ್ತು ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಿದರು.

ಕಾಂಗ್ರೆಸ್ ಸರ್ಕಾರ ಜಾಗತೀಕರಣ, ಉದಾರೀಕರಣ ನೀತಿಗಳನ್ನು ಜಾರಿಗೊಳಿಸಿತು. ಆ ನೀತಿಗಳನ್ನುಬಿಜೆಪಿ ಸರ್ಕಾರ ವೇಗವಾಗಿ ಜಾರಿಗೊಳಿಸುತ್ತಿವೆ. ಇದರಿಂದ ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಹಾಲು, ರೇಷ್ಮೆ, ಹಣ್ಣು, ತರಕಾರಿ ಸೇರಿದಂತೆ ಎಲ್ಲ ವಸ್ತುಗಳು ವಿದೇಶಗಳಿಂದ ಆಮದಾಗುತ್ತಿವೆ. ಇದರಿಂದ ದೇಶದ ರೈತರುಬೆಳೆದ ಉತ್ಪನ್ನಗಳಿಗೆ ಬೆಲೆ ಇಲ್ಲದಂತೆ ಆಗಿದೆ ಎಂದು ಪ್ರತಿಭಟನಕಾರರು ದೂರಿದರು.

ಆದಾಯ ಕೊರತೆಯಿಂದ ಸ್ವಾಭಿಮಾನಿ ರೈತರ ಆರ್ಥಿಕ ಬದುಕಿಗೆ ಪೆಟ್ಟು ಬಿದ್ದಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ರೈತರಿಗೆ ಹನಿ ನೀರಾವರಿ ವಿಚಾರವಾಗಿ ನೀಡುತ್ತಿದ್ದ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ದೇಶದ ರೇಷ್ಮೆ ಉತ್ಪಾದನೆಯಲ್ಲಿ ಶೇ 60ರಷ್ಟನ್ನು ರಾಜ್ಯದಲ್ಲಿಯೇ ಉತ್ಪಾದಿಸಲಾಗುತ್ತಿದೆ. ಒಂದೂವರೆ ಲಕ್ಷ ಕುಟುಂಬಗಳುರೇಷ್ಮೆ ಉದ್ಯಮದ ಮೇಲೆ ಅವಲಂಬಿತವಾಗಿವೆ. ವಾರ್ಷಿಕ ₹2,500 ಕೋಟಿ ವಹಿವಾಟು ನಡೆಸಿ ₹1,250 ಕೋಟಿ ಜಿಎಸ್‌ಟಿಯು ಸರ್ಕಾರಕ್ಕೆ ಸೇರುತ್ತಿದೆ.

ADVERTISEMENT

ಪಶು ಆಹಾರದ ಬೆಲೆ ಗಣನೀಯವಾಗಿ ಹೆಚ್ಚಿದೆ. ಆದರೆ ಹಾಲಿನ ದರ ಕಳೆದ ಮೂರು ವರ್ಷಗಳಿಂದ ಇಳಿಕೆಯಾಗಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಕಾರರು ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಪಿ.ಮಂಜುನಾಥ ರೆಡ್ಡಿ, ಹೇಮಚಂದ್ರ ಹಾಗೂ ಅಪಾರ ಸಂಖ್ಯೆಯ ರೈತರು ಪ‍್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.