
ಶಿಡ್ಲಘಟ್ಟ: ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಆಚರಿಸಲಾಯಿತು.
ಗ್ರೇಡ್–2 ತಹಶೀಲ್ದಾರ್ ಕೆ.ಎನ್.ಎಂ. ಮಂಜುನಾಥ್ ಮಾತನಾಡಿ, ‘ಸಮಾಜದಲ್ಲಿ ಜೀವಂತವಾಗಿರುವ ಮೂಢನಂಬಿಕೆ, ಮೌಢ್ಯತೆ ಮತ್ತು ಜಾತಿ ವ್ಯವಸ್ಥೆಯಿಂದ ದೂರು ಉಳಿದು ಮಾನವರಾಗಿ ಮಾನವೀಯತೆಯಿಂದ ಬದುಕಬೇಕು ಎಂಬ ಸಂದೇಶ ಸಾರಿದ ವಿಶ್ವಮಾನ ರಾಷ್ಟ್ರಕವಿ ಕುವೆಂಪು ಅವರ ಆದರ್ಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಸದೃಢ ಮತ್ತು ಸುಂದರ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಹೇಳಿದರು.
‘ಕುವೆಂಪು ಯಾವುದೇ ಒಂದು ಜಾತಿಗೆ ಸೇರಿದವರಲ್ಲ. ವೈಚಾರಿಕ ಪ್ರಜ್ಞೆಯೊಂದಿಗೆ ಪೂರ್ಣ ಅರಳಿದ ಬದುಕು ಅವರದಾಗಿತ್ತು. ಅನುಭವದ ಆಳಕ್ಕೆ ಇಳಿದು ಕವಿಯಾಗಿ ಜಗತ್ತಿಗೆ ವಿಚಾರಧಾರೆ ಹಂಚುವ ಮೂಲಕ ವಿಶ್ವಕ್ಕೆ ಉತ್ತಮ ಸಂದೇಶ ನೀಡಿ ಮನುಕುಲದಲ್ಲಿ ಅಜರಾಮರಾಗಿ ಉಳಿದರು. ವಿಶ್ವಮಾನವನಾಗಿ ಎಲ್ಲರ ಮನೆ ಮನದಲ್ಲಿ ಉಳಿದುಕೊಂಡ ಇಂತಹ ಮಹಾನ್ ಸಂತನನ್ನು ನೆನೆಯುವುದೇ ನಮ್ಮೆಲ್ಲರ ಭಾಗ್ಯ’ ಎಂದು ಸ್ಮರಿಸಿದರು.
ಪ್ರತಿಯೊಬ್ಬರು ವಿಶ್ವಮಾನವನಾಗಬೇಕು. ವಿದ್ಯಾರ್ಥಿಗಳು ಪುಸ್ತಕ ಪ್ರೀತಿ ಬೆಳೆಸಿಕೊಂಡು, ಅಧ್ಯಯನಶೀಲರಾಗಬೇಕು. ಪುಸ್ತಕದ ಮೂಲಕ ಮನುಷ್ಯ ಮರುಹುಟ್ಟು ಪಡೆಯಬೇಕು ಎಂದರು.
ರಾಷ್ಟಕವಿ ಕುವೆಂಪುಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಜೆ.ಎಸ್.ವೆಂಕಟಸ್ವಾಮಿ, ನಾರಾಯಣಸ್ವಾಮಿ, ಎಸ್.ವಿ.ನಾಗರಾಜ್‌ರಾವ್, ಪುರುಷೋತ್ತಮ್, ಹಿರೇಬಲ್ಲ ಕೃಷ್ಣಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.