ADVERTISEMENT

ಜನಸಂಚಾರ ಸಂಪೂರ್ಣ ಸ್ತಬ್ಧ

ಅಂಗಡಿಗಳು ಬಂದ್‌: ರಸ್ತೆಗಿಳಿಯದ ಬಸ್‌, ಆಟೊ, ಟ್ಯಾಕ್ಸಿಗಳು

​ಪ್ರಜಾವಾಣಿ ವಾರ್ತೆ
Published 24 ಮೇ 2020, 17:01 IST
Last Updated 24 ಮೇ 2020, 17:01 IST
ಚಿಕ್ಕಬಳ್ಳಾಪುರ ನಗರದ ಭಾನುವಾರದ ನಗರದ ಪ್ರಮುಖ‌ ರಸ್ತೆಗಳು‌ ಜನರಿಲ್ಲದೆ ಬಿಕೋ‌ ಎನ್ನುತ್ತಿದ್ದವು
ಚಿಕ್ಕಬಳ್ಳಾಪುರ ನಗರದ ಭಾನುವಾರದ ನಗರದ ಪ್ರಮುಖ‌ ರಸ್ತೆಗಳು‌ ಜನರಿಲ್ಲದೆ ಬಿಕೋ‌ ಎನ್ನುತ್ತಿದ್ದವು   

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹೊಸ ಲಾಕ್‍ಡೌನ್ ಆದೇಶದನ್ವಯ ಭಾನುವಾರ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಸಂಪೂರ್ಣ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಹೀಗಾಗಿ ನಗರದಲ್ಲಿ ಜನಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.

ಲಾಕ್‌ಡೌನ್‌ ಸಡಿಲಿಕೆ ಕೊಟ್ಟ ನಂತರ ಕೊರೊನಾ ಸೋಂಕನ್ನೂ ಮರೆತವರಂತೆ ಜನರು ರಸ್ತೆಗಿಳಿದು ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ವಾಹನ ದಟ್ಟಣೆಯೂ ಕೂಡ ಅಧಿಕವಾಗಿರುತ್ತಿತ್ತು. ಆದರೆ, ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರಮಂದಿರ, ಬಾರ್‌, ರೆಸ್ಟೋರೆಂಟ್‌, ಹೋಟೆಲ್, ಕ್ಲಬ್‌, ಕ್ಷೌರಿಕ ಅಂಗಡಿ, ಪ್ಲಾಸ್ಟಿಕ್‌, ಬಟ್ಟೆ, ಕಬ್ಬಿಣ, ಕಿರಾಣಿ, ಜ್ಯೂಸ್‌, ಬೇಕರಿ ಮಳಿಗೆಗಳು ಸಂಪೂರ್ಣ ಮುಚ್ಚಿದ್ದವು. ಸಾರಿಗೆ ಬಸ್‌ಗಳ ಸೇವೆಯನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ಆಟೊ, ಟ್ಯಾಕ್ಸಿಗಳು ಕೂಡ ರಸ್ತೆಗಿಳಿಯಲಿಲ್ಲ. ನಗರದ ವಿವಿಧ ವೃತ್ತಗಳು ‌ಮತ್ತು ರಸ್ತೆಯಲ್ಲಿ ಜನರಿಲ್ಲದೆ ಬಿಕೋ ಎನಿಸುತ್ತಿದ್ದವು. ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ವಾಹನಗಳು ಮಾತ್ರ ಸಂಚರಿಸಿದವು. ಪೊಲೀಸ್‌ ಸಿಬ್ಬಂದಿ ಬಿಗಿ ಬಂದೋಬಸ್ತ್‌ ಒದಗಿಸಿದ್ದರು.

ADVERTISEMENT

ರಸ್ತೆಗಿಳಿಯದ ಜನ

ಚಿಂತಾಮಣಿ: ಭಾನುವಾರ ಜನತಾ ಕರ್ಫ್ಯೂಗೆ ಎಲ್ಲ ವರ್ಗದ ಜನರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಿದರು.

ನಗರದ ಎಲ್ಲ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಬಂದ್ ಆಗಿದ್ದವು. ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು. ಚಿಂತಾಮಣಿ ಭಾನುವಾರದ ಸಂತೆಗೆ ಹೆಸರುವಾಸಿ. ಬೇರೆ ಬೇರೆ ಜಿಲ್ಲೆಗಳ ಹಾಗೂ ಬೇರೆ ರಾಜ್ಯಗಳ ಜನರು ಸಹ ಭಾನುವಾರದ ಸಂತೆಗೆ ಬಂದು ವ್ಯಾಪಾರ ವಹಿವಾಟು ನಡೆಸುತ್ತಾರೆ. ರೈತರು ಮಾರಾಟಕ್ಕಾಗಿ ತಮ್ಮ ಉತ್ಪನ್ನಗಳನ್ನು ತರುತ್ತಾರೆ. ಆದರೆ ಈ ಭಾನುವಾರ ಯಾವುದೇ ವಹಿವಾಟು ಇಲ್ಲದೆ ಮಾರುಕಟ್ಟೆ ಹಾಗೂ ಸಂತೆ ಪ್ರದೇಶ ಬಿಕೋ ಎನ್ನುತ್ತಿತ್ತು.

ನಗರದ ಎಪಿಎಂಸಿ ಮಾರುಕಟ್ಟೆ, ಗೂಡಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆಗಳು ಸಹ ಸಂಪೂರ್ಣ ಬಂದ್ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.