ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2,823 ಎಕರೆ ಪ್ರದೇಶವನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಧಿಸೂಚನೆ ಹೊರಡಿಸಿರುವ ವಿಚಾರ ಹೈಕೋರ್ಟ್ ಅಂಗಳದಲ್ಲಿ ಇದೆ. ಮಂಗಳವಾರ (ಸೆ.9) ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಹೈಕೋರ್ಟ್ ಅಂಗಳಕ್ಕೆ ವಿಚಾರವು ತಲುಪಿದ ನಂತರ ಪರ ವಿರೋಧದ ಜಟಾಟಪಿಗೂ ತಡೆ ಬಿದ್ದಿದೆ. ಮಂಗಳವಾರದ ವಿಚಾರಣೆಯ ಮೇಲೆ ರೈತರು ದೃಷ್ಟಿ ನೆಟ್ಟಿದ್ದಾರೆ.
ಜಂಗಮಕೋಟೆ ಹೋಬಳಿಯ 1,180 ರೈತರ 2,823 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಂದಾಗಿತ್ತು.
ಇದನ್ನು ವಿರೋಧಿಸಿ ಜಮೀನು ಮಾಲೀಕರು ಮತ್ತು ರೈತ ಸಂಘದ ಮುಖಂಡರು ಹೋರಾಟ ನಡೆಸಿದ್ದರು. ಮತ್ತೊಂದು ಕಡೆ ಜಮೀನನ್ನು ಕೈಗಾರಿಕೆಗೆ ನೀಡುತ್ತೇವೆ ಎಂದು ಕೆಲವು ಜಮೀನು ಮಾಲೀಕರು ಮತ್ತು ರೈತ ಸಂಘದ ಮುಖಂಡರು ಸರ್ಕಾರಕ್ಕೆ ಮನವಿ ಸಹ ಸಲ್ಲಿಸಿದ್ದರು. ಕೈಗಾರಿಕಾ ಸಚಿವರು, ಜಿಲ್ಲಾಡಳಿತ ಭವನ ಹೀಗೆ ನಾನಾ ಕಡೆಗಳಲ್ಲಿ ಪರ ವಿರೋಧದ ಪ್ರತಿಭಟನೆಗಳು ನಡೆದಿದ್ದವು. ಜಮೀನು ಸ್ವಾಧೀನ ವಿಚಾರವು ತೀವ್ರ ಜಟಾಪಟಿಗೆ ಕಾರಣವಾಗಿತ್ತು.
ಈ ನಡುವೆ 50 ರೈತರು ಜಮೀನು ನೀಡುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಜಂಗಮಕೋಟೆಯ ಕೈಗಾರಿಕೀಕರಣದ ವಿಚಾರವು ತಣ್ಣಗಾಗಿದೆ.
ರೈತರ ವಿರೋಧದ ನಡುವೆಯೇ ಪೊಲೀಸರ ಸರ್ಪಗಾವಲಿನಲ್ಲಿ ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಜಮೀನನ್ನು ಜುಲೈನಲ್ಲಿ ವೀಕ್ಷಿಸಿದ್ದರು. ವಗಾನಹಳ್ಳಿ, ಗೊಲ್ಲಹಳ್ಳಿ, ಕೊಲುಮೆ ಹೊಸೂರು, ಬಸವಾಪಟ್ಟಣ, ನಡಿಪಿನಾಯಕನಹಳ್ಳಿ ಯಣ್ಣಂಗೂರು, ಅರಿಕೆರೆ, ಸಂಜೀವಪುರ, ಹೊಸಪೇಟೆ, ಎದ್ದಲತಿಪ್ಪೇನಹಳ್ಳಿ ಗ್ರಾಮಗಳಲ್ಲಿ ಈ ವಿಚಾರವು ತೀವ್ರ ಕಾವೇರಿತ್ತು.
ಬಸವಾಪಟ್ಟಣದಲ್ಲಿ ರೈತರ ಜಮೀನುಗಳನ್ನು ವೀಕ್ಷಣೆ ಮಾಡಲು ಬಂದಿದ್ದ ಅಧಿಕಾರಿಗಳಿಗೆ, ‘ಯಾವುದೇ ಕಾರಣಕ್ಕೂ ನಾವು ಭೂಮಿ ಕೊಡುವುದಿಲ್ಲ. ಯಾರು ನಿಮಗೆ ಭೂಮಿ ಕೊಡುವುದಾಗಿ ಹೇಳಿದ್ದಾರೋ ಅವರ ಭೂಮಿಗಳಿಗೆ ಹೋಗಿ ವೀಕ್ಷಣೆ ಮಾಡಿಕೊಳ್ಳಿ, ರೈತರ ಅನುಮತಿಯಿಲ್ಲದೆ, ರೈತರ ಭೂಮಿಯ ಬಳಿಗೆ ಬರುವುದಕ್ಕೆ ನಿಮಗೇನು ಅಧಿಕಾರವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ, ‘ಭೂಮಿ ಸ್ವಾಧೀನಕ್ಕೆ ಬಂದಿಲ್ಲ. ಕೆಲ ರೈತರು, ನ್ಯಾಯಾಲಯದಲ್ಲಿ ನ್ಯಾಯಾಲಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದ್ದರಿಂದ ನಾನೇ ಖುದ್ದಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಬಂದಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದರು.
ನ್ಯಾಯಾಲಯಕ್ಕೆ 50 ರೈತರು: ಸುಮಾರು 50 ರೈತರು ಹೈಕೋರ್ಟ್ ಮೊರೆ ಹೋಗಿದ್ದೇವೆ. ಇದು ಫಲವತ್ತಾದ ಕೃಷಿ ಭೂಮಿ. ಇಲ್ಲಿ ರೇಷ್ಮೆ, ತೋಟಗಾರಿಕೆ ಸೇರಿದಂತೆ ಎಲ್ಲ ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ನಾಲ್ಕು ಕರೆಗಳು ಇವೆ. ಅರಣ್ಯ ಇಲಾಖೆ ಜಮೀನು ಇದೆ. ಸರ್ಕಾರದ ಕೈಗಾರಿಕಾ ನೀತಿ ಪ್ರಕಾರವೇ ಈ ಜಮೀನನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ’ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾವು ಜಮೀನು ನೀಡುವುದಿಲ್ಲ ಎಂದು 860 ರೈತರು ಅಧಿಕಾರಿಗಳಿಗೆ ತಿಳಿಸಿದ್ದೆವು. ಈ ದಾಖಲೆಗಳನ್ನೂ ನಾವು ಪಡೆದಿದ್ದೇವೆ. ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸುತ್ತಿದ್ದಾರೆ. ಈಗ ಭೂಮಿ ಸ್ವಾಧೀನಪಡಿಸಿಕೊಳ್ಳುವ ಭಾಗದಲ್ಲಿಯೇ 500 ಎಕರೆಯಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಅಂದ ಮೇಲೆ ಇಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಿ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.
‘ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಪ್ರತಿಭಟನೆ’ ಭೂಸ್ವಾಧೀನ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಈಗಾಗಲೇ ಮಾತುಕತೆಗಳು ನಡೆಯುತ್ತಿವೆ. ಈ ಬಗ್ಗೆ ಸಭೆಗಳನ್ನೂ ನಡೆಸುತ್ತಿದ್ದೇವೆ ಎಂದು ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು. ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಆದರೆ ಕೆಐಎಡಿಬಿ ಅಧಿಕಾರಿಗಳು ಇಲ್ಲಿಯವರೆಗೂ ನ್ಯಾಯಾಲಯಕ್ಕೆ ಯಾವುದೇ ಆಕ್ಷೇಪವನ್ನು ದಾಖಲಿಸಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.