ADVERTISEMENT

ಕಡೆ ಶನಿವಾರ, ದೇಗುಲಗಳಲ್ಲಿ ಸಂಭ್ರಮ

ಲಕ್ಷ್ಮೀ ವೆಂಕಟರಮಣ ಸ್ವಾಮಿ, ನರಸಿಂಹಸ್ವಾಮಿ ದೇವಾಲಯಗಳಲ್ಲಿ ಹಬ್ಬದ ವಾತಾವರಣ, ಬೆಳಿಗ್ಗೆಯಿಂದಲೇ ದರ್ಶನಕ್ಕೆ ಹರಿದುಬಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 14:14 IST
Last Updated 24 ಆಗಸ್ಟ್ 2019, 14:14 IST
ನಗರದ ಕಂದವಾರ ಬಾಗಿಲು ಬಳಿ ಇರುವ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ದರ್ಶನ ಪಡೆದ ಭಕ್ತರು
ನಗರದ ಕಂದವಾರ ಬಾಗಿಲು ಬಳಿ ಇರುವ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ದರ್ಶನ ಪಡೆದ ಭಕ್ತರು   

ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಕಡೆಯ ಶನಿವಾರ ಜಿಲ್ಲೆಯಾದ್ಯಂತ ಲಕ್ಷ್ಮೀ ವೆಂಕಟರಮಣ ಸ್ವಾಮಿ, ನರಸಿಂಹಸ್ವಾಮಿ ದೇವಾಲಯಗಳಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು.

ವಿಶೇಷವಾಗಿ ಅಲಂಕರಿಸಿದ ದೇವಾಲಯಗಳಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆಯುತ್ತಿದ್ದ ದೃಶ್ಯಗಳು ಕಂಡುಬಂದವು.


ಬಾಗೇಪಲ್ಲಿ ಗಡಿದಂ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ, ತಲಕಾಯಲ ಬೆಟ್ಟ ವೆಂಕಟರಮಣಸ್ವಾಮಿ, ಆವಲಬೆಟ್ಟದ ಧೇನುಗಿರಿ ಲಕ್ಷ್ಮಿ ನರಸಿಂಹ ದೇವಾಲಯ, ಶ್ರೀನಿವಾಸ ಸಾಗರ ಕೆರೆ ವೆಂಕಟರಮಣಸ್ವಾಮಿ ದೇವಾಲಯ, ನಂದಿ ಬಳಿಯ ನರಸಿಂಹಸ್ವಾಮಿ ಬೆಟ್ಟದಲ್ಲಿರುವ ನರಸಿಂಹಸ್ವಾಮಿ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು.

ADVERTISEMENT

ಚಿಕ್ಕಬಳ್ಳಾಪುರದ ಕಂದವಾರ ಬಾಗಿಲು ಬಳಿ ಇರುವ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ, ದಿನ್ನೆಹೊಸಹಳ್ಳಿ ರಸ್ತೆಯಲ್ಲಿರುವ ಜಾಲಾರಿ ನರಸಿಂಹಸ್ವಾಮಿ, ಚಿಕ್ಕದಾಸರಹಳ್ಳಿ ಗುಡ್ಡದ ಮೇಲಿನ ಶ್ರೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶನಿವಾರ ಹಬ್ಬದ ಸಡಗರ ಮನೆ ಮಾಡಿತ್ತು.


ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಮಹಾಮಂಗಳಾರತಿ, ಹವನದಂತಹ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಜತೆಗೆ ತೀರ್ಥ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಭಕ್ತರು ಸರದಿ ಸಾಲಿನಲ್ಲಿ ನಿಂತು ತಮ್ಮ ಆರಾಧ್ಯ ದೈವವನ್ನು ಕಣ್ತುಂಬಿಕೊಳ್ಳುವ ಜತೆಗೆ ತನ್ಮತೆಯಿಂದ ಆರಾಧಿಸುತ್ತಿದ್ದದ್ದು ಗೋಚರಿಸಿತು.


ಕೆಲವೆಡೆ ದಿನವೀಡಿ, ಭಜನೆ, ಗಾಯನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ದೈವದ ಚಿನ್ಹೆಯಾದ ನಾಮವನ್ನು ಹಣೆ ಮೇಲೆ ಧರಿಸಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.