ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದ ಆವರಣದಲ್ಲಿ ಸ್ಥಾಪಿಸಿದ ‘ರ್‍ಯಾಪಿಡ್ ಟೆಸ್ಟ್ ಪಾಲಿಮರೈಸ್ಡ್ ಚೈನ್ ರಿಯಾಕ್ಷನ್’ (ಆರ್‌ಟಿಪಿಸಿಆರ್) ಪ್ರಯೋಗಾಲಯವನ್ನು ಶನಿವಾರ ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸುಧಾಕರ್, ‘ಈವರೆಗೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಶಂಕಿತ ವ್ಯಕ್ತಿಗಳಿಂದ ಪಡೆದ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಗಳಿಗೆ ಕಳುಹಿಸಿ ಕೊಡಲಾಗುತ್ತಿತ್ತು. ಇದೀಗ ಆರ್‌ಟಿಪಿಸಿಆರ್ ಪ್ರಯೋಗಾಲಯ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಕೋವಿಡ್ ವಿರುದ್ಧದ ಸಮರದಲ್ಲಿ ನಮಗೆ ಬಲ ಬಂದಂತಾಗಿದೆ’ ಎಂದು ಹೇಳಿದರು.
‘ಆರ್‌ಟಿಪಿಸಿಆರ್ ಪ್ರಯೋಗಾಲಯದಲ್ಲಿ ನಿತ್ಯ ಕನಿಷ್ಠ 500 ಜನರಿಗೆ ಕೋವಿಡ್-19 ಪರೀಕ್ಷೆ ಮಾಡಬಹುದು. ಇದರಿಂದ ಜಿಲ್ಲೆಯಲ್ಲಿ ತ್ವರಿತವಾಗಿ ಕೋವಿಡ್ ಪ್ರಕರಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಲು, ಆ ಮೂಲಕ ಸೋಂಕು ಹರಡುವುದು ನಿಯಂತ್ರಿಸಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.
‘ಪ್ರಯೋಗಾಲಯವನ್ನು ಅತ್ಯಾಧುನಿಕ ಮಾದರಿಯಲ್ಲಿ, ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ಪ್ರಯೋಗಾಲಯದ ಹವಾ ನಿಯಂತ್ರಿತ ವ್ಯವಸ್ಥೆ ಕೊಠಡಿ ಒಳಗೆ ಆಗಾಗ ತಾಜಾ ಗಾಳಿ ಪೂರೈಕೆಯಾಗುವಂತಹ ವ್ಯವಸ್ಥೆ ಇದೆ. ಹೀಗಾಗಿ, ಪ್ರಯೋಗಾಲಯ ಸಿಬ್ಬಂದಿಗೆ ಸೋಂಕು ತಗುಲುವ ಅಪಾಯವಿಲ್ಲ’ ಎಂದರು.
‘ಜನರು ಕೋವಿಡ್ ಬಗ್ಗೆ ಭಯಪಡುವ ಬದಲು ಎಚ್ಚರಿಕೆ ವಹಿಸಬೇಕು. ಶುಚಿತ್ವದ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು. ಕಡ್ಡಾಯವಾಗಿ ಮುಖಗವಸು ಹಾಕಿಕೊಳ್ಳಬೇಕು. ಅಂತರ ಕಾಯ್ದುಕೊಳ್ಳಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭಾಸ್ಕರ್,ಹಂಗಾಮಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.