ADVERTISEMENT

ರೈತರ ಸಬಲೀಕರಣ ಸರ್ಕಾರಗಳ ಆದ್ಯತೆಯಾಗಲಿ:ಶಾಸಕ ಡಾ.ಕೆ.ಸುಧಾಕರ್ ಆಶಯ

ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 15:59 IST
Last Updated 23 ಜನವರಿ 2020, 15:59 IST
ಶಾಸಕ ಡಾ.ಕೆ.ಸುಧಾಕರ್ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಶಾಸಕ ಡಾ.ಕೆ.ಸುಧಾಕರ್ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.   

ಚಿಕ್ಕಬಳ್ಳಾಪುರ: ‘ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತ ಬಂದ ಎಲ್ಲ ಸರ್ಕಾರಗಳೂ ರೈತರಿಗೆ ಶಾಶ್ವತವಾದ ಕಾರ್ಯಕ್ರಮಗಳನ್ನು ಕೊಡುವಲ್ಲಿ ಸೋತಿವೆ. ಇನ್ನಾದರೂ ಸರ್ಕಾರಗಳು ರೈತರ ನೋವಿಗೆ ಸ್ಪಂದಿಸದೇ ಹೋದರೆ ದೇಶದ ಪ್ರಗತಿಗೆ ಮಾರಕವಾಗುತ್ತದೆ. ಆದ್ದರಿಂದ ರೈತರನ್ನು ಸದೃಢಪಡಿಸುವುದು ಸರ್ಕಾರಗಳ ಮೊದಲ ಆದ್ಯತೆ ಆಗಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ತೌಡನಹಳ್ಳಿಯಲ್ಲಿ ಗುರುವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ, ವೈಜ್ಞಾನಿಕ ಬೆಲೆ ಸಿಗಬೇಕು. ಆದರೆ ಇವತ್ತು ರೈತರು ವೈಜ್ಞಾನಿಕ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ಕಷ್ಟಪಟ್ಟು ಬೆಳೆ ಬೆಳೆದವರಿಗೆ ನಾಲ್ಕಾಣೆ, ಮಧ್ಯವರ್ಥಿಗಳಿಗೆ ಮುಕ್ಕಾಲು ಲಾಭವಾಗುತ್ತಿದೆ. ಇದನ್ನು ಬದಲಾಯಿಸಬೇಕಾದರೆ ಕೃಷಿ ಉತ್ಪನ್ನಗಳ ಬೆಲೆ ನಿಗದಿಪಡಿಸುವ ಸಮಿತಿಯಲ್ಲಿ ರೈತರು ಇರಬೇಕು. ಈ ಹೊಸ ಆಲೋಚನೆ ಬಗ್ಗೆ ಕೇಂದ್ರ ಸರ್ಕಾರ, ಪ್ರಧಾನಮಂತ್ರಿಗೆ ಪತ್ರ ಬರೆಯುತ್ತಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಈ ಭಾಗದ ರೈತರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಎರಡು ನೀರಾವರಿ ಯೋಜನೆಗೆ ಜಾರಿಗೊಳಿಸಲಾಗಿದೆ. ಎಚ್.ಎನ್.ವ್ಯಾಲಿ ಯೋಜನೆಯಲ್ಲಿ ಒಂದು ವಾರದಲ್ಲಿ ಕಂದವಾರ ಕೆರೆಗೆ ನೀರು ಬರುತ್ತದೆ. ನೂರು ರಸ್ತೆಗಳನ್ನು ಮಾಡಿದರೂ ಅಷ್ಟು ಸಂತಸ ಸಿಗುವುದಿಲ್ಲ. ಕಂದವಾರ ಕೆರೆ ತುಂಬಿದರೆ ಸುತ್ತಲಿನ ಐದಾರು ಕಿ.ಮೀ ವ್ಯಾಪ್ತಿಯಲ್ಲಿನ ಕೊಳವೆಬಾವಿಗಳ ಅಂತರ್ಜಲ ವೃದ್ಧಿಯಾಗುತ್ತದೆ. ಒಂದು ಯೋಜನೆ ರೂಪಿಸಿ ಅನುಷ್ಠಾನಗೊಳಿಸುವುದು ತಪಸ್ಸು ಇದ್ದಂತೆ. ಟೀಕೆ ಮಾಡುವುದು ಸುಲಭ, ರಚನಾತ್ಮಕ ಕೆಲಸದ ಹಿಂದಿನ ಹೋರಾಟ, ಪರಿಶ್ರಮ ಅರ್ಥ ಮಾಡಿಕೊಳ್ಳುವುದು ಕಷ್ಟ’ ಎಂದರು.

‘ನೀರಿಲ್ಲದಿದ್ದರೆ ಎಂತಹ ಭೂಮಿ ಇದ್ದರೂ ವ್ಯರ್ಥ. ಆದರೆ ಕೊಳವೆಬಾವಿ ಕೊರೆಸಬೇಕಾದರೆ ಕನಿಷ್ಠ ₹5 ಲಕ್ಷ ಬೇಕು. ಸಾಲದ ಹಣದಲ್ಲಿ ಹಾಕಿದ ಬಾವಿ ಮೂರು ತಿಂಗಳಲ್ಲಿ ಬತ್ತಿ ಹೋದರೆ ಬಡ ರೈತರ ಸ್ಥಿತಿ ಏನಾಗಬೇಡ. ನಾವು ಈಗಾಗಲೇ ಅನೇಕ ರೈತರ ಆತ್ಮಹತ್ಯೆ ನೋಡಿದ್ದೇವೆ. ರೈತರ ನೋವು ಅರ್ಥ ಮಾಡಿಕೊಂಡೇ ನೀರಿಗೆ ಮೊದಲ ಆದ್ಯತೆ ಕೊಟ್ಟಿರುವೆ. ಆದ್ದರಿಂದ ಕ್ಷೇತ್ರದ ಬಾವಿಗಳಲ್ಲಿ ನೀರು ನೋಡುವಂತಹ ಗತವೈಭವ ಮರಳಿ ತರಬೇಕು ಎನ್ನುವ ಗುರಿ ಹೊಂದಿರುವೆ. ಅದು ನಾಳೆಯೇ ಆಗುತ್ತದೆ ಎಂದು ಹೇಳಲಾರೆ. ಆ ದಾರಿಯಲ್ಲಿದ್ದೇವೆ. ಆದಷ್ಟು ಶೀಘ್ರದಲ್ಲಿಯೇ ಗುರಿ ತಲುಪುತ್ತೇವೆ’ ಎಂದು ಹೇಳಿದರು.

‘ಈ ಹಿಂದೆ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಆಗುತ್ತಿರಲಿಲ್ಲ. ಆದರೆ ನಾವು ಶಾಶ್ವತ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ನನ್ನ ಉದ್ದೇಶ. ಅಭಿವೃದ್ಧಿ ಕಾರ್ಯಗಳಿಗೆ ರೈತರೂ ಸಹಕರಿಸಬೇಕು. ಅದು ಬಿಟ್ಟು ರಸ್ತೆಗೆ ಅರ್ಧ ಅಡಿ ಜಮೀನು ಕೊಡುವುದಿಲ್ಲ ಎನ್ನುವ ಮನೋಭಾವ ಸರಿಯಲ್ಲ. ಉದಾರ ಮನಸ್ಸಿನವರಾಗಬೇಕು. ರಸ್ತೆ ಅಭಿವೃದ್ಧಿಯಾದರೆ ಊರು, ಜನರ ಅಭಿವೃದ್ಧಿಯಾಗುತ್ತದೆ. ಎಲ್ಲ ಹಳ್ಳಿಗಳ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಿ ಪ್ರತಿ ಒಂದು ಕಿ.ಮೀ ರಸ್ತೆಯನ್ನು ತಲಾ ₹1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದರು.

ಮುತ್ತೂರು ಕೋಡಿಯಿಂದ ಗಂಗನಹಳ್ಳಿ, ಕೊಂಡೇನಹಳ್ಳಿ, ತಿಮ್ಮನಹಳ್ಳಿ, ತೌಡನಹಳ್ಳಿ ಮಾರ್ಗವಾಗಿ ಮೇಲೂರು- ಚದಲಪುರ ಸೇರುವ ರಸ್ತೆಯನ್ನು ₹4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ತೌಡನಹಳ್ಳಿ ಗ್ರಾಮದಲ್ಲಿ, ₹3.40 ಕೋಟಿಗಳ ವೆಚ್ಚದ ಪೆರೇಸಂದ್ರ-ಸಾದಲಿ ರಸ್ತೆ ಸರಪಳಿ ಅಭಿವೃದ್ಧಿ ಕಾಮಗಾರಿಗೆ ಹಳೇಪೆರೇಸಂದ್ರ ಗ್ರಾಮದಲ್ಲಿ ಮತ್ತು ₹7 ಕೋಟಿ ವೆಚ್ಚದ ಪೆರೇಸಂದ್ರ-ಗೌರಿಬಿದನೂರು ರಸ್ತೆ ಸರಪಳಿ ಅಭಿವೃದ್ಧಿ ಕಾಮಗಾರಿಗೆ ಕಮ್ಮಗುಟ್ಟಹಳ್ಳಿ ಕ್ರಾಸ್‌ನಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.

ಮಾಜಿ ಶಾಸಕರಾದ ಶಿವಾನಂದ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಕೆ.ವಿ.ನಾಗರಾಜ್, ಶ್ರೀಧರ್, ಮೋಹನ್, ಮರುಳುಕುಂಟೆ ಕೃಷ್ಣಮೂರ್ತಿ, ಪಿ.ಎನ್.ರವೀಂದ್ರ ರೆಡ್ಡಿ, ಜಿ.ಆರ್.ನಾರಾಯಣಸ್ವಾಮಿ, ಚಂದ್ರಶೇಖರ್, ಕೃಷ್ಣಾರೆಡ್ಡಿ, ಎಸ್.ಕೆ.ಎಲ್.ದ್ಯಾವಣ್ಣ, ಕಾಳೇಗೌಡ, ಸತೀಶ್, ಉಮಾ ಶಂಕರ್, ಸುದಾ.ವೆಂಕಟೇಶ್, ನಾರಾಯಣಪ್ಪ, ಕಳವಾರ ಕೃಷ್ಣಮೂರ್ತಿ, ಬಿ.ಎಚ್.ನರಸಿಂಹಯ್ಯ, ಡಿ.ಎಂ.ಸಿ ಚನ್ನಕೇಶವ, ಕಳವಾರ ಕೃಷ್ಣಮೂರ್ತಿ, ಮಲ್ಲಪ್ಪ, ರಾಮಸ್ವಾಮಿ, ಫಯಾಜ಼್, ರಾಜಣ್ಣ, ದಯಾನಂದ ರೆಡ್ಡಿ, ನಾರಾಯಣಸ್ವಾಮಿ, ವಿಜಯಕುಮಾರ್, ಚನ್ನಪ್ಪರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.