ADVERTISEMENT

ಚಿಂತಾಮಣಿ: ಜಾನುವಾರು ಆರೋಗ್ಯ ತಪಾಸಣೆ

ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಿಸಾನ್ ಮೇಳ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 5:08 IST
Last Updated 9 ಫೆಬ್ರುವರಿ 2023, 5:08 IST
ಚಿಂತಾಮಣಿ ತಾಲ್ಲೂಕಿನ ಸೋಮಕಲಹಳ್ಳಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಆಯೋಜಿಸಿದ್ದ ಕಿಸಾನ್ ಮೇಳದಲ್ಲಿ ಏರ್ಪಡಿಸಿದ್ದ ಜಾನುವಾರು ತಪಾಸಣೆ ಶಿಬಿರ
ಚಿಂತಾಮಣಿ ತಾಲ್ಲೂಕಿನ ಸೋಮಕಲಹಳ್ಳಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಆಯೋಜಿಸಿದ್ದ ಕಿಸಾನ್ ಮೇಳದಲ್ಲಿ ಏರ್ಪಡಿಸಿದ್ದ ಜಾನುವಾರು ತಪಾಸಣೆ ಶಿಬಿರ   

ಚಿಂತಾಮಣಿ: ತಾಲ್ಲೂಕಿನ ಕೃಷಿ ವಿಜ್ಞಾನ ಕೇಂದ್ರದಿಂದ ನಿಕ್ರಾ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾದ ಹನುಮೈಗಾರಹಳ್ಳಿ ಮತ್ತು ಸೋಮಕಲಹಳ್ಳಿಯಲ್ಲಿ ಬುಧವಾರ ಕಿಸಾನ್ ಮೇಳ ಹಮ್ಮಿಕೊಳ್ಳಲಾಯಿತು. ಮೇಳದ ಅಂಗವಾಗಿ ಜಾನುವಾರು ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ. ಪಾಪಿರೆಡ್ಡಿ ಮಾತನಾಡಿ, ‘ಸಮಗ್ರ ಕೃಷಿ ಆಳವಡಿಸಿಕೊಂಡರೆ ಹೆಚ್ಚಿನ ಆದಾಯ ಪಡೆಯಬಹುದು. ರೈತರು ಒಂದೇ ಬೆಳೆಗೆ ಜೋತು ಬೀಳದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿಯ ಜತೆಗೆ ಕುರಿ-ಮೇಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆಯಂಥ ಉಪ ಕಸಬುಗಳನ್ನು ರೂಢಿಸಿಕೊಳ್ಳಬೇಕು. ವಿವಿಧ ತೋಟಗಾರಿಕೆ ಬೆಳೆ ಬೆಳೆಯಬೇಕು. ಬೆಲೆ ಕುಸಿತದ ಕಾಲದಲ್ಲೂ ಒಂದಲ್ಲ ಒಂದು ಬೆಳೆ ಕೈಹಿಡಿಯುತ್ತದೆ’ ಎಂದು ರೈತರಿಗೆ ಸಲಹೆ ನೀಡಿದರು.

ಕೃಷಿ ವಿಜ್ಞಾನಿ ಡಾ. ವಿಶ್ವನಾಥ್ ಜಿವಾಮೃತ, ತ್ಯಾಜ್ಯ ವಿಂಗಡಣೆ ಮತ್ತು ಅದರ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಇತ್ತಿಚಿನ ದಿನಗಳಲ್ಲಿ ರಾಸಾಯನಿಕ ಕೃಷಿಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಮಣ್ಣಿನಲ್ಲಿ ಯಾವ ಬೆಳೆಯೂ ಬೆಳೆಯಲಾಗದು. ಮಣ್ಣಿನ ಫಲವತ್ತತೆ ವೃದ್ಧಿಗೆ ರೈತರು ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.

ADVERTISEMENT

ಪಶು ವೈದ್ಯಾಧಿಕಾರಿ ಡಾ. ಚೆನ್ನಕೆಶವರೆಡ್ಡಿ ಮಾತನಾಡಿ, ಹವಾಮಾನ ವೈಪರಿತ್ಯದಿಂದ ಜಾನುವಾರಿಗಳಿಗೆ ರೋಗಗಳು ಕಾಣಿಸಿಕೊಳ್ಳುತ್ತಿವೆ. ರೈತರು ಎಚ್ಚರಿಕೆ ವಹಿಸಬೇಕು. ಪಶು ಆರೋಗ್ಯ ಕೇಂದ್ರಕ್ಕೆ ಭೇಟಿಕೊಟ್ಟು ಸೂಕ್ತ ಮಾಹಿತಿ ಪಡೆಯಬೇಕು. ಇತ್ತೀಚೆಗೆ ಚರ್ಮಗಂಟು ರೋಗ ಸಹ ಹರಡುತ್ತಿದೆ. ರೈತರು ತಮ್ಮ ಪಶುಗಳಿಗೆ ಲಸಿಕೆ ಹಾಕಿಸಬೇಕು ಎಂದರು.

ನಿಕ್ರಾ ಯೋಜನೆಯ ಹಿರಿಯ ಕ್ಷೇತ್ರ ಸಂಶೋಧಕ ಆನಂದ್ ಜಿವಾಮೃತ ತಯಾರಿಕೆಯ ಬಗ್ಗೆ ಪದ್ಧತಿ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತಿಳಿಸಿಕೊಟ್ಟರು.

ಕೃಷಿ ಇಲಾಖೆ ಆಶಾ, ಡಾ. ಮಂಜುನಾಥರೆಡ್ಡಿ, ಗ್ರಾಮದ ಮುಖ್ಯಸ್ಥ ಶ್ರೀ ವೆಂಕಟರೆಡ್ಡಿ, ಕೃಷ್ಣರೆಡ್ಡಿ ಮತ್ತು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಪ್ರಗತಿಪರ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.