ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಿಗುಪ್ಪೆ ಗ್ರಾಮದ ರೈತ ರಾಮಪ್ಪ (55) ಎಂಬುವರು ಶನಿವಾರ ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ಎಕರೆಯಲ್ಲಿ ಬೆಳೆದ ಹೂವಿನ ಬೆಳೆ ಲಾಕ್‌ಡೌನ್ ಕಾರಣಕ್ಕೆ ಮಾರಾಟವಾಗದೆ, ಸಾಲದ ಬಾಧೆಯಿಂದ ಚಿಂತಿತರಾಗಿ ರಾಮಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ನಾರಾಯಣಮ್ಮ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಮ್ಮ ಮೂರು ಎಕರೆ ಜಮೀನಿನ ಪೈಕಿ ರಾಮಪ್ಪ ಅವರು ಎರಡು ಎಕರೆಯಲ್ಲಿ ₹1 ಲಕ್ಷ ಖರ್ಚು ಮಾಡಿ ಹೂವು ಬೆಳೆದಿದ್ದರು. ಲಾಕ್ಡೌನ್ ನಿಂದಾಗಿ ಹೂವು ಮಾರಾಟವಾಗದೆ ನೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶನಿವಾರ ಬೆಳಿಗ್ಗೆ 6ರ ಸುಮಾರಿಗೆ ಜಮೀನಿಗೆ ಹೋಗಿ ಮನೆಗೆ ವಾಪಾಸಾಗಿ ವಿಷ ಸೇವಿಸಿದ ರೈತ ರಾಮಪ್ಪ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಿಗ್ಗೆ 11.30ರ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಮೃತ ರೈತನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.