ADVERTISEMENT

ತುಮ್ಮನಹಳ್ಳಿಯ ಮಾದರಿ ಸರ್ಕಾರಿ ಶಾಲೆ

ಡಿ.ಜಿ.ಮಲ್ಲಿಕಾರ್ಜುನ
Published 20 ಏಪ್ರಿಲ್ 2024, 6:48 IST
Last Updated 20 ಏಪ್ರಿಲ್ 2024, 6:48 IST
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ವಾತಂತ್ರ್ಯ ಸ್ಮಾರಕ ಗ್ಯಾಲರಿ ವೀಕ್ಷಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ವಾತಂತ್ರ್ಯ ಸ್ಮಾರಕ ಗ್ಯಾಲರಿ ವೀಕ್ಷಿಸಿದರು   

ಶಿಡ್ಲಘಟ್ಟ: ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆ ಗುಣಮಟ್ಟದ ಶಿಕ್ಷಣದ ಜೊತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ಶ್ರಮಿಸುವ ಶಾಲೆಯಾಗಿ ಹೆಸರಾಗಿದೆ.

ಈ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟವನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆಯುವ ಮೂಲಕ ಗ್ರಾಮೀಣ ಅಂತಃಸತ್ವವನ್ನು ಮತ್ತು ಪ್ರತಿಭೆಯನ್ನು ಆಗಿಂದಾಗ್ಗೆ ಪ್ರದರ್ಶಿಸುತ್ತಿರುತ್ತಾರೆ.

ಸತತವಾಗಿ ಐದು ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ 100ರಷ್ಟು ಫಲಿತಾಂಶವನ್ನು ಪಡೆಯುತ್ತಿರುವ ಈ ಶಾಲೆಯಲ್ಲಿ, ಶಿಕ್ಷಕರು ಆಸಕ್ತಿವಹಿಸಿ ವಿವಿಧ ಕ್ಷೇತ್ರಗಳ ತಜ್ಞರನ್ನು ಕರೆಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ಸಲಹೆ ಕೊಡಿಸುತ್ತಾರೆ. ಇಂತಹ ಕಾರ್ಯಕ್ರಮಗಳ ಪ್ರತಿಫಲವೆಂಬಂತೆ ಈ ಶಾಲೆಯ ವಿದ್ಯಾರ್ಥಿಗಳಾದ ಮುನೀಂದ್ರ (ಪೊಲೀಸ್ ಅಧಿಕಾರಿ), ವಿಜಯಕುಮಾರ್ (ತೋಟಗಾರಿಕಾ ಎಂಜಿನಿಯರ್), ಸಪ್ತಗಿರಿ (ಪಿಎಚ್.ಡಿ ಪದವಿ ಪಡೆದು ಧಾರವಾಡ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ) ಮುಂತಾದವರು ಶಾಲೆಗೆ ಕೀರ್ತಿ ತಂದ ಸಾಧಕರಾಗಿದ್ದಾರೆ. ಈ ಶಾಲೆಯ ವಿದ್ಯಾರ್ಥಿನಿ ಅಮೃತಾ ತನ್ನ ಲೇಖನಗಳಿಗಾಗಿ ರಾಜ್ಯಮಟ್ಟದ ‘ಬಾಲವಿದ್ಯಾಸಾಗರ’ ಪುರಸ್ಕಾರ ಪಡೆದಿದ್ದಾಳೆ.

ADVERTISEMENT

ಗಂಡುಕಲೆಯಾದ ಡೊಳ್ಳು ಕುಣಿತವನ್ನು ಈ ಶಾಲೆಯ ಹೆಣ್ಣುಮಕ್ಕಳು ಅತ್ಯುತ್ತಮವಾಗಿ ಅಭ್ಯಾಸ ಮಾಡಿ, ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ವಿವಿಧೆಡೆ ಪ್ರದರ್ಶಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಈ ಶಾಲೆಯ ಹೆಣ್ಣುಮಕ್ಕಳು ರಾಜ್ಯಮಟ್ಟದ ಕ್ರೀಡೆಗಳಲ್ಲಿ, ಪೈಕಾ, ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುವರು. ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು, ಜಿಲ್ಲೆ ಹಾಗೂ ವಿಭಾಗೀಯಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಉತ್ತಮ ನಟ, ನಟಿ, ರಚನಕಾರ, ನಿರ್ದೇಶನ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

87 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಮುಖ್ಯಶಿಕ್ಷಕ ಎಸ್.ಮಂಜುನಾಥ್, ಶಿಕ್ಷಕರಾದ ಎಸ್.ವಿ.ಮಾಲತಿ, ಆರ್.ಹೇಮಾವತಿ, ಜಿ.ಎಸ್.ಶಿಲ್ಪಕಲಾ, ಎನ್.ಡಿ.ಪಾಲಣ್ಣ, ಮಹೇಶ್ ಮತ್ತು ಆರ್.ಜೆ.ವಿಜಯಶ್ರೀ ಅವರು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದ್ದಾರೆ. 

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಜನಪದ ನೃತ್ಯ ತಂಡ

ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ, ಶೈಕ್ಷಣಿಕ ಪ್ರವಾಸ, ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್ ಬಳಸಿ ದೃಶ್ಯ ಶ್ರವಣದ ಇ– ಕಲಿಕೆ, ವಿಜ್ಞಾನ ಪ್ರಯೋಗಾಲಯದಲ್ಲಿ ಪ್ರಾಯೋಗಿಕ ತರಬೇತಿ ಜೊತೆಯಲ್ಲಿ ಪೋಷಕರ, ಹಿರಿಯ ವಿದ್ಯಾರ್ಥಿಗಳ ಸಹಕಾರ ಪಡೆಯುವ ಮೂಲಕ ಉತ್ತಮ ಕಲಿಕಾ ವಾತಾವರಣವನ್ನು ಈ ಶಾಲೆಯಲ್ಲಿ ಸೃಷ್ಟಿಸಿದ್ದಾರೆ.

ಮುಖ್ಯಶಿಕ್ಷಕ ಎಸ್.ಮಂಜುನಾಥ್
ಅತ್ಯುತ್ತಮ ಶಾಲಾ ವಾತಾವರಣವಿರುವ ನಮ್ಮ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಪೂರ್ಣ ಕಾಂಪೌಂಡ್ ಇಲ್ಲ. ಹೆಚ್ಚುವರಿ ಶಾಲಾ ಕೊಠಡಿಗಳು ಉತ್ತಮ ಆಸನ ವ್ಯವಸ್ಥೆ ರಂಗವೇದಿಕೆ ಮತ್ತು ಶಾಲಾ ಕೈತೋಟದ ಅವಶ್ಯಕತೆಯಿದೆ
-ಎಸ್.ಮಂಜುನಾಥ್ ಮುಖ್ಯಶಿಕ್ಷಕ
ಕವನ ವಿದ್ಯಾರ್ಥಿನಿ
ನಮ್ಮ ಶಾಲೆಯಲ್ಲಿ ಶಿಕ್ಷಕರು ಎಲ್ಲಾ ಕ್ಷೇತ್ರಗಳನ್ನೂ ಪರಿಚಯಿಸುತ್ತಾರೆ. ಕ್ರೀಡೆ ಸಾಂಸ್ಕೃತಿಕ ಚರ್ಚಾಸ್ಪರ್ಧೆ ವಿಜ್ಞಾನ ಕಲೆ – ನಮ್ಮ ಆಸಕ್ತ ವಿಷಯಗಳ ಬಗ್ಗೆ ಪ್ರೋತ್ಸಾಹಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುವರು. ಆ ಮೂಲಕ ಹಳ್ಳಿಮಕ್ಕಳಾದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತಾರೆ
-ಕವನ ವಿದ್ಯಾರ್ಥಿನಿ
ಉಮಾ ವಿದ್ಯಾರ್ಥಿನಿ
ನಮ್ಮನ್ನು ವಿಜ್ಞಾನ ಕೇಂದ್ರಗಳಿಗೆ ಉತ್ತಮ ಗ್ರಂಥಾಲಯ ಚಾರಿತ್ರಿಕ ಸ್ಥಳಗಳನ್ನು ತೋರಿಸಿದ್ದೇ ನಮ್ಮ ಶಿಕ್ಷಕರು. ಹಲವಾರು ಸಾಧಕರನ್ನು ನಮ್ಮ ಶಾಲೆಗೆ ಕರೆಸಿ ಪರಿಚಯಿಸುತ್ತಾರೆ
-ಉಮಾ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.