ADVERTISEMENT

ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ: ಜಿ.ಕೆ.ಸುನೀಲ್ ಕುಮಾರ್

ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಗತ ಸಮಾರಂಭ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 7:01 IST
Last Updated 24 ಜನವರಿ 2021, 7:01 IST
ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಗಣ್ಯರನ್ನು ಸ್ವಾಗತಿಸಲಾಯಿತು
ಬಾಗೇಪಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಾಗೂ ಗಣ್ಯರನ್ನು ಸ್ವಾಗತಿಸಲಾಯಿತು   

ಬಾಗೇಪಲ್ಲಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪುಸ್ತಕ ಹಾಗೂ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅನಿವಾರ್ಯ ಎಂದು ಸಬ್‌ಇನ್‌ಸ್ಪೆಕ್ಟರ್‌ ಜಿ.ಕೆ.ಸುನೀಲ್ ಕುಮಾರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಪ್ರಥಮ ವರ್ಷದ ಬಿ.ಎ., ಬಿ.ಕಾಂ. ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಉದ್ಯೋಗ ಪಡೆಯಲು ತೀವ್ರ ಪೈಪೋಟಿ ಇದೆ. ಹಾಗಾಗಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು. ನಿರಂತರ ಕಲಿಕೆಯಿಂದ ಯಶಸ್ಸು ಸಾಧ್ಯ. ಮೊಬೈಲ್‌ಗಳನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳಿ. ಅಪರಾಧ ಚಟುವಟಿಕೆಗಳಿಂದ ದೂರವಿರಿ ಎಂದು ಸಲಹೆ
ನೀಡಿದರು.

ADVERTISEMENT

ಪ್ರಾಂಶುಪಾಲ ಪ್ರೊ.ವೈ.ನಾರಾಯಣ ಮಾತನಾಡಿ, ‘ಸರ್ಕಾರಿ ಪದವಿ ಕಾಲೇಜಿನಲ್ಲಿ ಪಿಎಚ್‌ಡಿ ಪದವಿ ಪಡೆದ ಪ್ರಾಧ್ಯಾಪಕರು ಹೆಚ್ಚಿದ್ದಾರೆ. ಕಾಲೇಜಿನ ಎದುರು ₹1 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗಿದೆ. ಕಲಿಕೆಗೆ ಪೂರಕ ಸೌಕರ್ಯಗಳಿವೆ. ಪ್ರಾಧ್ಯಾಪಕರ ಮಾರ್ಗದರ್ಶನ ಪಡೆದು, ಉತ್ತಮ ಅಂಕ ಗಳಿಸಿ’ ಎಂದು ಹೇಳಿದರು.

ಗ್ರಂಥಪಾಲಕ ಡಾ.ಸಿ.ಎಸ್.ವೆಂಕಟರಾಮರೆಡ್ಡಿ, ‘ತಾಲ್ಲೂಕಿನಲ್ಲಿ ನದಿ, ನಾಲೆಗಳು, ಕೈಗಾರಿಕಾ ಪ್ರದೇಶಗಳು ಇಲ್ಲ. ಬಹುತೇಕರು ಕೃಷಿ ನಂಬಿ ಬದುಕುತ್ತಿದ್ದಾರೆ. ರೈತರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಅಧಿಕಾರಿಗಳಾಗಿದ್ದಾರೆ. ಭವಿಷ್ಯಕ್ಕೆ ಶಿಕ್ಷಣವೇ ಶಾಶ್ವತ. ಕಾಲೇಜು ಜೀವನವನ್ನು ಭವಿಷ್ಯಕ್ಕೆ ಭದ್ರ ಬುನಾದಿಯಾಗಿ ಬಳಿಸಿಕೊಳ್ಳಬೇಕು ಎಂದರು.

ಪ್ರಾಧ್ಯಾಪಕರಾದ ಡಾ.ಕೆ.ಎಂ.ನಯಾಜ್ ಅಹಮದ್, ಡಾ.ಬಿ.ಎನ್.ಪ್ರಭಾಕರ್, ಡಾ.ಮೋಹನ್, ಉಪನ್ಯಾಸಕರಾದ ಎಲ್.ಶ್ರೀನಿವಾಸ್, ಅನಿಲ್, ಮನೋರಂಜನ್, ನಂದನಾ, ಅಧೀಕ್ಷಕಿ ಅನಿತಾ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಕಾರ್ಯದರ್ಶಿ ಡಿ.ಎನ್.ಕೃಷ್ಣಾರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.