ADVERTISEMENT

ಚಿಂತಾಮಣಿ | ಅಪೌಷ್ಟಿಕ ಮಕ್ಕಳ ಸಂಖ್ಯೆ ಇಳಿಮುಖ

ಎಂ.ರಾಮಕೃಷ್ಣಪ್ಪ
Published 19 ಅಕ್ಟೋಬರ್ 2025, 3:12 IST
Last Updated 19 ಅಕ್ಟೋಬರ್ 2025, 3:12 IST
   

ಚಿಂತಾಮಣಿ: ತಾಲ್ಲೂಕಿನಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದು ಕೇವಲ 8 ಮಕ್ಕಳು ಮಾತ್ರ ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 473 ಅಂಗನವಾಡಿ ಕೇಂದ್ರಗಳಿದ್ದು ಅವುಗಳಲ್ಲಿ 16,705 ಮಕ್ಕಳು ಕಲಿಯುತ್ತಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ತಿಂಗಳು ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಎತ್ತರ, ತೂಕ ಪರಿಶೀಲಿಸಲಾಗುತ್ತದೆ. ತೂಕ ಕಡಿಮೆ ಇರುವ ಮತ್ತು ಬೆಳವಣಿಗೆಯಲ್ಲಿ ಕುಂಠಿತವಾಗಿರುವ ಮಕ್ಕಳನ್ನು ಗುರುತಿಸಿ ಆರೋಗ್ಯ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಂದ್ರ ಬಾಬು ಹೇಳುತ್ತಾರೆ.

2024-25ನೇ ಸಾಲಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 13 ಮಕ್ಕಳನ್ನು ಗುರುತಿಸಲಾಗಿತ್ತು. 2025-26 ಸಾಲಿನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ 8 ಮಕ್ಕಳು ಮಾತ್ರ ಪತ್ತೆಯಾಗಿದ್ದಾರೆ. 5 ವರ್ಷಗಳಿಂದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.

ADVERTISEMENT

ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಿದೆ. ಅಂಗನವಾಡಿಗಳಲ್ಲಿ ಮೊಟ್ಟೆ, ಚಿಕ್ಕಿ ಸೇರಿದಂತೆ ಪೌಷ್ಟಿಕಾಂಶವುಳ್ಳ ಆಹಾರ ವಿತರಿಸಲಾಗುತ್ತದೆ. ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಒಂದು ಹೊತ್ತಿನ ಊಟ ಮಾಡಿ ಮನೆಗೆ ತೆರಳುತ್ತಾರೆ. ಕೆಲವು ಮಕ್ಕಳ ಮನೆಗಳಲ್ಲಿ ಆರೋಗ್ಯ ಸುಧಾರಣೆಗೆ ಅಗತ್ಯವಾದ ಪೌಷ್ಟಿಕ ಆಹಾರ ದೊರೆಯುವುದಿಲ್ಲ. ಪೋಷಕರಲ್ಲಿ ಜಾಗೃತಿ ಕೊರತೆಯಿಂದಾಗಿ ಮಕ್ಕಳು ಅಪೌಷ್ಟಿಕತೆಗೆ ಈಡಾಗುತ್ತಿದ್ದಾರೆ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಮಕ್ಕಳ ಆರೋಗ್ಯದ ಮಾಹಿತಿ ಸಂಗ್ರಹಿಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಪೋಷಣ್ ಟ್ರ್ಯಾಕ್ ಆ‍್ಯಪ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ಹಂಚಿಕೊಳ್ಳುತ್ತಾರೆ. 

ಅಂಗನವಾಡಿಯಲ್ಲಿ ಮಕ್ಕಳು ಮತ್ತು ಸಿಬ್ಬಂದಿ ಹಾಜರಾತಿ, ಮಕ್ಕಳಿಗೆ ವಿತರಿಸುವ ಆಹಾರ, ಕೇಂದ್ರ ಮೂಲ ಸೌಕರ್ಯಗಳ ಬಗ್ಗೆಯೂ ಆ‍್ಯಪ್‌ನಲ್ಲಿ ಮಾಹಿತಿ ರವಾನಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಆಹಾರ ಗುಣಮಟ್ಟದ ಮಾಹಿತಿ ದಾಖಲಿಸಲು ಆ‍್ಯಪ್‌ನ್ನು ಉನ್ನತೀಕರಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆಗಾಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಪೌಷ್ಟಿಕ ಪುನಶ್ಚೇತನ ಕೇಂದ್ರ ಆರಂಭಿಸಲಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಕೇಂದ್ರಕ್ಕೆ ಕರೆತರು ಪೋಷಕರು ಆಸಕ್ತಿ ತೋರುವುದಿಲ್ಲ. ಮಕ್ಕಳ ಜೊತೆಗೆ 15 ದಿನ ಪೋಷಕರು ಕೇಂದ್ರದಲ್ಲಿ ಇರಬೇಕು ಎಂಬ ಷರತ್ತಿಗೆ ಪೋಷಕರು ಒಪ್ಪುತ್ತಿಲ್ಲ. 3-4 ದಿನ ಇದ್ದು ಹೋಗುತ್ತಾರೆ. ಸದ್ಯ ಕೇಂದ್ರದಲ್ಲಿ ಯಾವ ಮಕ್ಕಳು ಇಲ್ಲ. ಮಕ್ಕಳ ಜತೆ ಉಳಿದುಕೊಳ್ಳುವ ತಂದೆ ಅಥವಾ ತಾಯಿಗೆ ನರೇಗಾ ಯೋಜನೆಯಡಿ ದಿನಗೂಲಿ ನೀಡಲಾಗುತ್ತದೆ. ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೂ ಪೋಷಕರು ಕೇಂದ್ರದಲ್ಲಿ ಉಳಿಯುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.