ADVERTISEMENT

ಚಿಕ್ಕಬಳ್ಳಾಪುರ: ರಾಜಗೃಹ ಸ್ಮಾರಕವಾಗಿ ಘೋಷಿಸಲು ಆಗ್ರಹ

ರಾಜಗೃಹ ಧ್ವಂಸ ಮಾಡಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆರ್‌ಪಿಐ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 13:03 IST
Last Updated 13 ಜುಲೈ 2020, 13:03 IST
ಆರ್‌ಪಿಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಆರ್‌ಪಿಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ಮುಂಬೈನ ದಾದರ್‌ನಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ರಾಜಗೃಹವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುವ ಜತೆಗೆ ರಾಜಗೃಹವನ್ನು ರಾಷ್ಟ್ರ ಸ್ಮಾರಕವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಳಿಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಅವರ ಮೂಲಕ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಆರ್‌ಪಿಐ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ, ‘ಮುಂಬೈನಲ್ಲಿರುವ ಅಂಬೇಡ್ಕರ್ ನಿವಾಸ ‘ರಾಜಗೃಹ’ದ ಮೇಲೆ ಜುಲೈ 7ರಂದು ನಡೆದ ದಾಳಿಯನ್ನು ಆರ್‌ಪಿಐ ತೀವ್ರವಾಗಿ ಖಂಡಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಪೊಲೀಸರು ಈ ಘಟನೆಯ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಹಾಗೆಯೇ ಈ ಘಟನೆಯ ಹಿಂದಿರುವ ಕುತಂತ್ರಿಗಳ ಕೈವಾಡವನ್ನು ಬಹಿರಂಗಪಡಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಹೇಳಿದರು.

‘ಅಂಬೇಡ್ಕರ್ ಅವರು ಈ ಜಗತ್ತು ಕಂಡ ಅಪ್ರತಿಮ ಜ್ಞಾನಿ, ಈ ಮಹಾಪುರುಷ ತಾನು ಬದುಕಿದ್ದ ಕಾಲಘಟ್ಟದಲ್ಲಿ ತಾನೇ ವಿನ್ಯಾಸಗೊಳಿಸಿ ಕಟ್ಟಿಸಿ, ಬದುಕಿ ಬಾಳಿದ್ದ ಅಂಬೇಡ್ಕರರ ಕನಸಿನ ಮನೆ ರಾಜಗೃಹದ ಮೇಲೆ ವಿಕೃತ ಮನಸ್ಸಿನ ಭಯೋತ್ಪಾದಕ ದುಷ್ಕರ್ಮಿಗಳು ದಾಳಿ ಮಾಡಿ ದ್ವಂಸಗೊಳಿಸಿರುವುದು ತುಂಬಾ ಆಘಾತಕಾರಿ ಸಂಗತಿಯಾಗಿದೆ’ ಎಂದರು.

‘ಕೆಲ ಮತೀಯವಾದಿಗಳು ಅಂಬೇಡ್ಕರ್ ಕುಟುಂಬದವರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಲೇ ಇದ್ದಾರೆ. ಇದರಿಂದ ಅವರ ಮೌಲ್ಯವನ್ನು ನಾಶಪಡಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ತಿಳಿಸಿದರು.

‘ರಾಜಗೃಹ ಬಿಹಾರದಲ್ಲಿ ಅಂತರರಾಷ್ಟ್ರೀಯ ಬೌದ್ಧ, ಪ್ರೇಕ್ಷಣೀಯ ಮತ್ತು ಐತಿಹಾಸಿಕ ಸ್ಥಳವಾದುದನ್ನು ಸದಾ ನೆನೆಯಲೆಂದೇ ಅಂಬೇಡ್ಕರ್ ಅವರು ತಮ್ಮ ನಿವಾಸಕ್ಕೆ ರಾಜಗೃಹ ಎಂದು ನಾಮಕರಣ ಮಾಡಿದ್ದರು. ಹೀಗಾಗಿ, ಅದನ್ನು ಅಂತರರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ರಾಜಗೃಹ ನಿವಾಸದಲ್ಲಿ ಬೃಹತ್ ಗ್ರಂಥಾಲಯವಿದೆ. ಕಿಡಿಗೇಡಿಗಳು ಅದಕ್ಕೂ ಬೆಂಕಿ ಹಚ್ಚಲು ಹೇಸುವುದಿಲ್ಲ. ಅದಕ್ಕಾಗಿ ರಾಜಗೃಹ, ಮುದ್ರಣಾಲಯ, ಚೈತ್ಯಭೂಮಿ, ದೀಕ್ಷಾ ಭೂಮಿ ರಕ್ಷಿಸಬೇಕು. ಜೊತೆಗೆ ಅಂಬೇಡ್ಕರ್ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು’ ಹೇಳಿದರು.

ಆರ್‌ಪಿಐ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎಚ್.ನರಸಿಂಹಪ್ಪ, ಉಪಾಧ್ಯಕ್ಷರಾದ ಮುನಿಶಾಮಪ್ಪ, ಈಶ್ವರಪ್ಪ, ಕಾರ್ಯದರ್ಶಿ ವೆಂಕಟೇಶಪ್ಪ, ಪದಾಧಿಕಾರಿಗಳಾದ ಪ್ರಕಾಶ್, ಮುನಿರಾಜು, ವೇಣು, ಹರಿಪ್ರಕಾಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.