ADVERTISEMENT

ಶಿಡ್ಲಘಟ್ಟ| ಸಂತೆ ಮೈದಾನದ ಅಭಿವೃದ್ಧಿಗೆ ₹4.65 ಕೋಟಿ: ಶಾಸಕ ಬಿ.ಎನ್.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 5:12 IST
Last Updated 19 ಸೆಪ್ಟೆಂಬರ್ 2025, 5:12 IST
   

ಶಿಡ್ಲಘಟ್ಟ: ನಗರದಲ್ಲಿರುವ ವಾರದ ಸಂತೆ ಮೈದಾನವನ್ನು ಅಭಿವೃದ್ಧಿಪಡಿಸಿ ಸಂತೆಗೆ ಬರುವ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

ನಗರದಲ್ಲಿನ ವಾರದ ಸಂತೆ ಮೈದಾನಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ವಾರದ ಸಂತೆಯಲ್ಲಿ ಸುತ್ತಾಡಿ ವೀಕ್ಷಿಸಿದರು. ಸಂತೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ವ್ಯಾಪಾರ ಮಾಡಿಕೊಂಡು ಕೂರುವ ವ್ಯಾಪಾರಿಗಳಿಗೆ ಬಿಸಿಲು ಗಾಳಿಯಿಂದ ರಕ್ಷಿಸಲು ಮೇಲ್ಚಾವಣಿ ನಿರ್ಮಿಸಬೇಕಿದೆ.

ಶೌಚಾಲಯ, ಕ್ಯಾಂಟೀನ್, ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ನಿರ್ಮಿಸಬೇಕು. ಮುಖ್ಯವಾಗಿ ಇಲ್ಲಿ ಸ್ವಚ್ಚತಾ ಕಾರ್ಯ ಆಗಬೇಕು. ಮಳೆಗಾಲ ಸೇರಿದಂತೆ ವರ್ಷದ ಉದ್ದಕ್ಕೂ ಇಲ್ಲಿ ಮಳೆ ನೀರು ಅಥವಾ ಚರಂಡಿ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಸಂತೆಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಎರಡೂ ದ್ವಾರಗಳನ್ನು ನಿರ್ಮಿಸಿ ಗೇಟ್ ಅಳವಡಿಸಬೇಕಿದ್ದು, ಈ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ನಗರೋತ್ಥಾನ-4ನೇ ಹಂತದಲ್ಲಿ ವಾರದ ಸಂತೆ ಮೈದಾನ ಪ್ರದೇಶ ಅಭಿವೃದ್ಧಿಗೆ ₹4.65 ಕೋಟಿ ಮೀಸಲಿಡಲಾಗಿದ್ದು, ಬೆಳಗಾವಿಯಲ್ಲಿ ನಿರ್ಮಿಸಿರುವ ಸಂತೆ ಮೈದಾನದ ಮಾದರಿಯಲ್ಲೇ ಶಿಡ್ಲಘಟ್ಟದ ಸಂತೆ ಮೈದಾನ ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ನಗರಸಭೆ ಅಧ್ಯಕ್ಷ ಎಂ.ವೆಂಕಟಸ್ವಾಮಿ, ನಗರಸಭೆ ಪೌರಾಯುಕ್ತೆ ಜಿ.ಅಮೃತ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಮಾಧವಿ, ಎಇಇ ರಘುನಾಥ್, ತಾದೂರು ರಘು, ಜಿಲ್ಲಾ ಸಹಕಾರಿ ಸಂಘದ ಮುರಳಿ, ನವೀನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.