ADVERTISEMENT

ಚಿಮೂಲ್‌ಗೆ 10 ಎಕರೆ ಜಾಗ ಮಂಜೂರು: ಸಚಿವ ಡಾ.ಎಂ.ಸಿ.ಸುಧಾಕರ್ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 13:46 IST
Last Updated 1 ಮೇ 2025, 13:46 IST
ಚಿಂತಾಮಣಿ ತಾಲ್ಲೂಕಿನ ಜಂಗಮಶೀಗೇಹಳ್ಳಿ ನೂತನ ಪಶು ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು
ಚಿಂತಾಮಣಿ ತಾಲ್ಲೂಕಿನ ಜಂಗಮಶೀಗೇಹಳ್ಳಿ ನೂತನ ಪಶು ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು   

ಚಿಂತಾಮಣಿ: ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಮೂಲಕ ಗಮನಸೆಳೆದಿರುವ ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ(ಚಿಮೂಲ್) ಅಗತ್ಯವಾದ 10 ಎಕರೆ ಜಾಗವನ್ನು ಮಂಜೂರು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಭರವಸೆ ನೀಡಿದರು.

ತಾಲ್ಲೂಕಿನ ಜಂಗಮಶೀಗೇಹಳ್ಳಿಯಲ್ಲಿ ಸ್ಥಾಪಿಸಿರುವ ನೂತನ ಪಶುಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು.

ನೂತನವಾಗಿ ಸ್ಥಾಪನೆಯಾಗಿರುವ ಚಿಮೂಲ್‌ನ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದೆ ಸಾಗಬೇಕಾಗಿದೆ. 10 ಎಕರೆ ಜಾಗ ನೀಡುವುದರಿಂದ ಪ್ಯಾಕಿಂಗ್ ಘಟಕ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸರ್ಕಾರದಿಂದ ರೈತರಿಗೆ ನೀಡುತ್ತಿರುವ ಸಹಾಯ ಧನವನ್ನು ಹೆಚ್ಚಿಸುವ ಚಿಂತನೆ ಇದೆ ಎಂದು ತಿಳಿಸಿದರು.

ADVERTISEMENT

ವಿರೋಧಪಕ್ಷಗಳಿಗೆ ರೈತರ ಮೇಲೆ ಕಾಳಜಿ ಇಲ್ಲ. ರೈತರಿಗಾಗಿ ಹಾಲಿನ ಬೆಲೆಯನ್ನು ಸ್ವಲ್ಪಮಟ್ಟಿಗೆ ಜಾಸ್ತಿ ಮಾಡಿದರೆ ಸುಖಾಸುಮ್ಮನೆ ಹುಯಿಲೆಬ್ಬಿಸುತ್ತಿದ್ದಾರೆ. ರೈತರು ಕೊಳ್ಳುವ ಪಶುಆಹಾರ, ಪಶುಔಷಧಿಗಳ ಬೆಲೆ ಏರಿಕೆಯಾಗಿದೆ. ಉತ್ಪಾದನಾ ವೆಚ್ಚ ಅಧಿಕವಾಗಿದೆ ಎಂದರು.

‘ಮಸ್ತೇನಹಳ್ಳಿಯ ಕೈಗಾರಿಕಾ ಪ್ರಾಂಗಣಕ್ಕೆ ಸಮರ್ಪಕವಾದ ವಿದ್ಯುತ್ ಸಂಪರ್ಕ ಇರಲಿಲ್ಲ. ನಾನು ಸಚಿವನಾದ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇನೆ. ಈಗ ಹಲವಾರು ಕಂಪನಿಗಳು ಸ್ಥಾಪನೆಯಾಗಲು ಮುಂದೆ ಬರುತ್ತಿವೆ. 2010ರಲ್ಲಿ ನಾನು ಕಂಡ ಕನಸು ಇದೀಗ ನನಸಾಗುತ್ತಿದೆ. ಸರ್ಕಾರ ಮತ್ತು ವಿವಿಧ ಧಾನಿಗಳ ನೆರವಿನಿಂದ ಕುಡಿಯುವ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ’  ಎಂದು ತಿಳಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಮುನಿನಾರಾಯಣಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಎಂ.ರೋಜಾ, ಮಾದಿಗ ದಂಡೋರದ ರಾಜ್ಯ ಘಟಕದ ಮುಖಂಡ ಜೆ.ಎಂ.ದೇವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾಬ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ತಹಶೀಲ್ದಾರ್ ಸುದರ್ಶನ ಯಾದವ್ ಭಾಗವಹಿಸಿದ್ದರು.

ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ

ಮುಂದಿನ ಸಚಿವ ಸಂಪುಟದ ಸಭೆಯನ್ನು ಪ್ರಸಿದ್ಧ ಗಿರಿಧಾಮವಾದ ನಂದಿಬೆಟ್ಟದಲ್ಲಿ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. 3-4 ಜಿಲ್ಲೆಗಳ ಅಭಿವೃದ್ಧಿ ಯೋಜನೆಗಳು ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಗುವುದು. ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್‌ನ ಸುವರ್ಣ ಮಹೋತ್ಸವವನ್ನು ನಡೆಸಲಾಗುವುದು ಎಂದು ಸಚಿವ ಡಾ.ಎಂ.ಸಿ. ಸುಧಾಕರ್‌ ತಿಳಿಸಿದರು.

ಚನ್ನಪಟ್ಟಣ ಮಾದರಿಯಲ್ಲಿ ಕೆರೆಗಳಿಗೆ ನೀರು

‘ವಿಶ್ವೇಶ್ವರಯ್ಯ ಜಲನಿಗಮದಿಂದ ₹41 ಕೋಟಿ ಮಂಜೂರು ಮಾಡಿಸಿದ್ದೇನೆ. ಜತೆಗೆ ಕುಶಾವತಿ ನದಿಯಲ್ಲಿ ಹೂಳು ತೆಗೆದು ನೀರಿನ ಶೇಖರಣೆ ಸಾಮರ್ಥ್ಯ ಹೆಚ್ಚಿಸಲು ಹಾಗೂ ಸುತ್ತಮುತ್ತಲಿಕ ಕೆರೆಗಳಿಗೆ ನೀರು ತುಂಬಿಸಲು ₹94 ಕೋಟಿ ಮಂಜೂರು ಮಾಡಿಸಿದ್ದೇನೆ’ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ಎಚ್.ಎನ್ ವ್ಯಾಲಿ ಯೋಜನೆಯಲ್ಲಿ ಶಿಡ್ಲಘಟ್ಟ ಚಿಂತಾಮಣಿ ತಾಲ್ಲೂಕುಗಳ 160 ಕೆರೆಗಳಿಗೆ ನೀರು ಹರಿಸಲಾಗುವುದು. ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಯಾವ ರೀತಿ ಕೆರೆಗಳಿಗೆ ನೀರು ತುಂಬಿಸಿದರೋ ಅದೇ ರೀತಿ ನಮ್ಮ ತಾಲ್ಲೂಕಿನ ಕೆರೆಗಳಿಗೂ ನೀರು ಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.