ADVERTISEMENT

ಅಕ್ಕಿ, ಬೇಳೆಯಲ್ಲಿ ಹುಳುಗಳ ರಾಶಿ!

ಆದರ್ಶ ಶಾಲೆಯಲ್ಲಿ ಅನಾವರಣಗೊಂಡ ಮತ್ತೊಂದು ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 4:20 IST
Last Updated 14 ನವೆಂಬರ್ 2025, 4:20 IST
ಕಳಪೆ ಗುಣಮಟ್ಟದ ಗೋಧಿ
ಕಳಪೆ ಗುಣಮಟ್ಟದ ಗೋಧಿ   

ಗೌರಿಬಿದನೂರು: ಇಲ್ಲಿನ ಇಡಗೂರು ರಸ್ತೆಯಲ್ಲಿರುವ ಆದರ್ಶ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಸಂಗ್ರಹಿಸಲಾಗಿರುವ ಅಕ್ಕಿ, ಬೇಳೆ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳಲ್ಲಿ ಹುಳುಗಳ ರಾಶಿ ಕಂಡುಬಂದಿದ್ದು, ಈ ಘಟನೆಯು ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ವಿಚಲಿತಗೊಳಿಸಿದೆ. 

ಶೌಚಾಲಯಗಳ ಅವ್ಯವಸ್ಥೆ ಸೇರಿದಂತೆ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸದ ಕಾರಣಕ್ಕೆ ಆದರ್ಶ ಶಾಲೆಯು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ, ಶಾಲೆಯಲ್ಲಿನ ವಾಸ್ತವ ಸ್ಥಿತಿ ಕುರಿತು ಪರಿಶೀಲನೆಗಾಗಿ ತಹಶೀಲ್ದಾರ್ ಅರವಿಂದ್ ಕೆ.ಎಂ ಮತ್ತು ಬಿಇಒ ಗಂಗರೆಡ್ಡಿ ಅವರು ಗುರುವಾರ ಖುದ್ದು ಭೇಟಿ ನೀಡಿದರು. 

ವಿದ್ಯಾರ್ಥಿಗಳ ಬಿಸಿಯೂಟದ ಉದ್ದೇಶಕ್ಕೆ ಸಂಗ್ರಹಿಸಲಾಗಿದ್ದ ಅಕ್ಕಿ ಮತ್ತು ಬೇಳೆ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಬಿಇಒ, ಅಕ್ಕಿ ಮತ್ತು ಬೇಳೆಯ ಮೂಟೆಗಳಿಂದ ಹುಳುಗಳು ಹೊರಬರುತ್ತಿರುವ ದೃಶ್ಯವನ್ನು ಕಂಡು ಬೆಚ್ಚಿಬಿದ್ದರು. ಜೊತೆಗೆ ತೊಗರಿ ಬೇಳೆಯು ದೂಳಿನಂತಾಗಿರುವುದನ್ನು ಕಂಡ ತಹಶೀಲ್ದಾರ್, ಈ ಪದಾರ್ಥಗಳು ಪ್ರಾಣಿಗಳು ತಿನ್ನಲೂ ಯೋಗ್ಯವಲ್ಲ. ಇದನ್ನು ಮಕ್ಕಳಿಗೆ ಹೇಗೆ ನೀಡುತ್ತಿದ್ದೀರಿ. ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವಿರೇ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ADVERTISEMENT

ಅಲ್ಲದೆ, ಅಕ್ಷರ ದಾಸೋಹ ಮತ್ತು ಶಾಲಾ ಮುಖ್ಯಸ್ಥೆಯ ಅಮಾನತಿಗಾಗಿ ಮೇಲಧಿಕಾರಿಗಳಿಗೆ ತಕ್ಷಣವೇ ಶಿಫಾರಸು ಮಾಡುವುದಾಗಿ ತಹಶೀಲ್ದಾರ್ ಅರವಿಂದ್ ಕೆ.ಎಂ ತಿಳಿಸಿದರು. 

ಶಾಲೆಯಲ್ಲಿ ಪ್ರತಿದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ಮತ್ತು ಬಾಳೆಹಣ್ಣನ್ನೂ ನೀಡುತ್ತಿಲ್ಲ ಎಂಬ ದೂರಿನ ಮೇರೆಗೆ ತಹಶೀಲ್ದಾರ್ ಅವರು ಎಲ್ಲ ಕಡತಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಲೆಕ್ಕಪತ್ರದಲ್ಲಿ ಭಾರಿ ವ್ಯತ್ಯಾಸವಿರುವುದು ಕಂಡುಬಂದಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. 

ಜೊತೆಗೆ ಮತ್ತಷ್ಟು ದಾಖಲೆಗಳನ್ನು ನೀಡುವಂತೆ ತಹಶೀಲ್ದಾರ್ ಕೇಳಿದ್ದು, ಶಾಲೆ ಮುಖ್ಯಸ್ಥೆ ಎಲ್ಲ ದಾಖಲೆಗಳನ್ನು ಬೀರುವಿನಲ್ಲಿಟ್ಟು, ಯಾರಿಗೂ ಮಾಹಿತಿ ನೀಡದೆ, ರಜೆ ತೆಗೆದುಕೊಂಡಿದ್ದಾರೆ ಎಂಬುದಾಗಿ ಶಿಕ್ಷಕರೊಬ್ಬರು ಹೇಳಿದ್ದಾರೆ. 

ಶಾಲೆ ಪ್ರಾರಂಭವಾಗಿ ಏಳು ತಿಂಗಳು ಕಳೆದಿದೆ. ಪ್ರಥಮ ಸೆಮಿಸ್ಟರ್ ಮುಗಿದು, 2ನೇ ಸೆಮಿಸ್ಟರ್ ಆರಂಭವಾದ ಹೊರತಾಗಿಯೂ, ಈವರೆಗೆ 120 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನೇ ನೀಡಿಲ್ಲ ಎಂದು ಬಿಇಒ ಗಂಗರೆಡ್ಡಿ ಅವರಿಗೆ ಎಸ್‌ಡಿಎಂಸಿ ಸದಸ್ಯರು ದೂರಿದರು. ಈ ಕುರಿತು ಮುಖ್ಯಶಿಕ್ಷಕಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಇಒ ಗಂಗರೆಡ್ಡಿ ತಿಳಿಸಿದರು. 

ತಹಶೀಲ್ದಾರ್ ಅರವಿಂದ್ ಕೆ ಎಂ ಮತ್ತು ಬಿ ಇ ಒ ಗಂಗರೆಡ್ಡಿ ಶಾಲೆಗೆ ಭೇಟಿ ನೀಡಿರುವುದು.
ಬೇಳೆಯಲ್ಲಿ ಹುಳುಗಳು
484 ವಿದ್ಯಾರ್ಥಿಗಳಿಗೆ 5 ಕೆ ಜಿ ತರಕಾರಿ
ಪುಡಿ ಪುಡಿಯಾಗಿ ದೂಳಿನಂತಾಗಿರುವ ಬೇಳೆ

‘ನಿಯಮ ಗಾಳಿಗೆ ತೂರಿದ ಅಧಿಕಾರಿಗಳು’

ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಮಾಡಿರುವ ಸರ್ಕಾರವು ಇಂತಿಷ್ಟೇ ಆಹಾರ ನೀಡಬೇಕು ಎಂಬ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ ಈ ನಿಯಮಗಳಿಗೆ ಅಕ್ಷರ ದಾಸೋಹದ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಬಿಸಿಯೂಟಕ್ಕೆ ಬಳಸುವ ಆಹಾರ ಪದಾರ್ಥಗಳಲ್ಲಿ ಹುಳುಗಳೇ ತುಂಬಿವೆ. ದಾಸ್ತಾನು ಮಾಡಿರುವ ಎಲ್ಲ ಅಕ್ಕಿ ಮತ್ತು ಬೇಳೆಯ ಮೂಟೆಗಳಲ್ಲಿ ರಾಶಿಗಟ್ಟಲೇ ಹುಳುಗಳಿವೆ. ಇನ್ನು ಬೇಳೆಕಾಳುಗಳು ಪೌಡರ್ ರೀತಿಯಾಗಿದೆ. 494 ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕಾಗಿ ಕೇವಲ ಮೂರ್ನಾಲು ಕೆ.ಜಿಯಷ್ಟು ತರಕಾರಿಗಳನ್ನು ಮಾತ್ರ ಬಳಸಲಾಗುತ್ತಿದೆ. ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಪಕ್ಕದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯಿಂದ ನೀರು ತರಲಾಗುತ್ತಿತ್ತು ಎಂದು ಅಧಿಕಾರಿಗಳ ಬಳಿ ವಿದ್ಯಾರ್ಥಿಗಳ ಪೋಷಕರು ದೂರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.