ಪ್ಯಾಲೆಸ್ಟೈನ್‌ನಲ್ಲಿ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಮರ್ ಝಘಾ ಅವರಿಗೆ ಸದ್ಗುರು ಮಧುಸೂದನ ಸಾಯಿ ಅವರು ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ’ ನೀಡಿದರು.
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಜಾಗತಿಕ ಸಾಂಸ್ಕೃತಿಕ ಉತ್ಸವ’ದಲ್ಲಿ ಶನಿವಾರ ಪ್ಯಾಲೆಸ್ಟೈನ್‌ನಲ್ಲಿ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಮರ್ ಝಘಾ ಅವರಿಗೆ ಸದ್ಗುರು ಮಧುಸೂದನ ಸಾಯಿ ಅವರು ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ’ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದ್ಗುರು ಮಧುಸೂದನ ಸಾಯಿ, ನಮ್ಮ ಜೀವನದಲ್ಲಿ ಬರುವ ಕಷ್ಟಗಳೇ ನಾವು ದೇವರ ಕಡೆಗೆ ತಿರುಗಲು ಮತ್ತು ನಮ್ಮ ಜೀವನಕ್ಕೆ ಹೆಚ್ಚಿನ ಅರ್ಥವನ್ನು ಕಂಡುಕೊಳ್ಳಲು ಕಾರಣವಾಗುತ್ತವೆ ಎಂದು ಹೇಳಿದರು.
ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಜನರಿಗೆ ಜೀವನವು ಸುಲಭವಾಗಿಲ್ಲ. ನಾಳೆ ನೋಡುತ್ತೇವೆಯೇ ಎನ್ನುವುದೇ ಅವರಿಗೆ ಪ್ರಶ್ನೆ. ಮುಂದಿನ ಊಟ, ಔಷಧಿ ಸಿಗುತ್ತದೆಯೇ ಎಂಬುದರ ಖಾತರಿ ಇಲ್ಲ. ಮತ್ತೆ ಮಕ್ಕಳು ಶಾಲೆಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರವೇ ಸಿಗದ ಪರಿಸ್ಥಿತಿಯಲ್ಲಿ ಅಲ್ಲಿ ಬದುಕು ಸಾಗುತ್ತಿದೆ ಎಂದರು.
ಆ ದೇಶಗಳಲ್ಲಿಂದ ಬಂದಿರುವ ಭಕ್ತರು ಮತ್ತು ಗಣ್ಯರು ಉತ್ತಮ ಭವಿಷ್ಯದ ಬಗ್ಗೆ ಸಾಕಷ್ಟು ವಿಶ್ವಾಸ ಮತ್ತು ಭರವಸೆಗಳನ್ನು ವ್ಯಕ್ತಪಡಿಸಿದ್ದಾರೆ. ನಾವು ಸಮಸ್ಯೆಗಳನ್ನು ಕಂಡು ಹಿಮ್ಮೆಟ್ಟಬಾರದು. ಬದುಕು ಸುಗಮಗೊಳಿಸಲು ಒಗ್ಗೂಡಿ ಕೆಲಸ ಮಾಡಬೇಕು. ಇದನ್ನು ಹೇಳುವುದು ತುಂಬಾ ಸುಲಭ, ಆದರೆ ಕಾರ್ಯರೂಪಕ್ಕೆ ತರುವುದು ತುಂಬಾ ಕಷ್ಟ ಎಂದು ಸಲಹೆ ಮಾಡಿದರು.
‘ಮಾನವೀಯ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದ ಸಮರ್ ಝಘಾ, ಸತ್ಯಸಾಯಿ ಬಾಬಾ ಅವರ ಷರತ್ತುಗಳು ಇಲ್ಲದ ಪ್ರೀತಿ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಯಾವುದೇ ಪ್ರತಿಫಲ ನಿರೀಕ್ಷೆ ಮಾಡದೆ ಮಧುಸೂದನ ಸಾಯಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಕಾರ್ಯಗಳಿಗೆ ಅವರ ಬೆಂಬಲ ಮುಂದುವರಿಯಲಿ’ ಎಂದು ಕೋರಿದರು.
ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನ ಟಸ್ಟಿ ಆನಂದ್ ಕಡಲಿ ಮಾತನಾಡಿ, ಅನ್ನಪೂರ್ಣ ಯೋಜನೆ ಮೂಲಕ ಪ್ರಸ್ತುತ 1 ಕೋಟಿ 80 ಲಕ್ಷ ಮಕ್ಕಳಿಗೆ ಬೆಳಗಿನ ಪೌಷ್ಟಿಕ ಆಹಾರ ವಿತರಿಸುತ್ತಿದ್ದೇವೆ. ಕೆಲವೊಂದು ಸಮಾನ ಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ 2028ರ ವೇಳೆಗೆ ಮಧುಸೂದನ ಸಾಯಿ ಅವರ ಮಾರ್ಗದರ್ಶದಲ್ಲಿ 8 ಕೋಟಿ ಮಕ್ಕಳಿಗೆ ಬೆಳಗಿನ ಪೌಷ್ಟಿಕ ಆಹಾರ ನೀಡುವ ಗುರಿ ಹೊಂದಿದ್ದೇವೆ ಎಂದು ಭವಿಷ್ಯದ ಕನಸು ಹಂಚಿಕೊಂಡರು.
ಜೋರ್ಡಾನ್‌ನ ಅಧ್ಯಾತ್ಮ ಸಾಧಕಿ ಶೋರೌಕ್ ಮೊಹಮದ್ ರಂಜಾನ್ ಅವರನ್ನು ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಟ್ರಸ್ಟಿ ಸಾಯಿ ಲೀಲಾ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.