ADVERTISEMENT

ಗೌರಿಬಿದನೂರು| ಸಿರಿಧಾನ್ಯ ಮೇಳಕ್ಕೆ ರಂಗೋಲಿ ಮೆರುಗು

ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಮೇಳ l ಜನರ ಸೆಳೆದ ವಿವಿಧ ತಳಿಯ ಎತ್ತು, ಕುರಿ, ಫಲ ಪುಷ್ಪಗಳು, ಖಾದ್ಯಗಳು

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 6:22 IST
Last Updated 9 ಜನವರಿ 2026, 6:22 IST
ಗೌರಿಬಿದನೂರು ನಗರದ ನೇತಾಜಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳಕ್ಕೆ ಚಾಲನೆ
ಗೌರಿಬಿದನೂರು ನಗರದ ನೇತಾಜಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳಕ್ಕೆ ಚಾಲನೆ   

ಗೌರಿಬಿದನೂರು: ಇಲ್ಲಿನ ನೇತಾಜಿ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳಕ್ಕೆ ಸಿರಿಧಾನ್ಯಗಳನ್ನು ಕುಟ್ಟುವ ಮತ್ತು ಸಿರಿಧಾನ್ಯಗಳ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಲಾಯಿತು. 

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ‘ಸಿರಿಧಾನ್ಯಗಳ ಬಳಕೆಯಿಂದ ಎಲ್ಲ ರೋಗಗಳಿಂದ ದೂರವಿರಬಹುದು’ ಎಂದು ಪ್ರತಿಪಾದಿಸಿದರು. 

ಕೃಷಿ ಮತ್ತು ಸಂಬಂಧಿಸಿದ ಇಲಾಖೆಗಳಿಂದ ಇಂತಹ ಶ್ರೇಷ್ಠ ಕಾರ್ಯಕ್ರಮ ಆಯೋಜಿಸಿರುವುದರಿಂದ ಜನಸಾಮಾನ್ಯರು ಮತ್ತು ರೈತರಿಗೆ ತುಂಬಾ ಉಪಯುಕ್ತವಾಗಿದೆ. ಇಂದಿನ ಆಧುನಿಕ ಆಹಾರ ಪದ್ಧತಿಯಿಂದ ಯುವ ಸಮೂಹವು ಮಧುಮೇಹ, ಹೃದ್ರೋಗ ರೀತಿಯ ಹಲವು ಕಾಯಿಲೆಗಳಿಗೆ ಸಿಲುಕುತ್ತಿದ್ದಾರೆ. ಹಳೆಯ ಕಾಲದಲ್ಲಿ ಪಾಲನೆ ಮಾಡಲಾಗುತ್ತಿದ್ದ ಸಿರಿಧಾನ್ಯಗಳನ್ನು ಬಳಸುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ಆರೋಗ್ಯವಂತ ಜೀವನ ಸಾಗಿಸಬಹುದು. ಸಿರಿಧಾನ್ಯಗಳನ್ನು ಪ್ರೋತ್ಸಾಹಿಸಲು ಸರ್ಕಾರವು ಪ್ರೋತ್ಸಾಹ ಧನ ನೀಡುತ್ತಿದೆ ಎಂದರು. 

ADVERTISEMENT

ರೈತರು ಇಂಥ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಬೆಳೆಗಳನ್ನು ಬೆಳೆಯಲು ಹೆಚ್ಚಿನ ನೀರಿನ ಅಗತ್ಯವಿಲ್ಲ. ರೋಗಬಾಧೆ ಕಡಿಮೆ ಇರುತ್ತದೆ. ಹೆಚ್ಚಿನ ರಸಗೊಬ್ಬರ ಹಾಕುವ ಅನಿವಾರ್ಯತೆಯೂ ಇರುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ರೈತರಲ್ಲಿ ಅರಿವು ಮೂಡಿಸಬೇಕು. ಈ ಮೂಲಕ ಸಿರಿಧಾನ್ಯಗಳನ್ನು ಬೆಳೆಯಲು ರೈತರನ್ನು ಹುರಿದುಂಬಿಸಬೇಕು ಎಂದು ಸಲಹೆ ನೀಡಿದರು. 

ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಗಮದ ಅಧ್ಯಕ್ಷ ಬಿ.ಜಿ. ಗಣೇಶ್ ಮಾತನಾಡಿ, ಇಂದು ಬೆಂಗಳೂರಿನಲ್ಲಿ ಕೆಲಸ ಮಾಡುವ ಬಹುತೇಕ ಮಂದಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಎಲ್ಲರೂ ಸಿರಿಧಾನ್ಯಗಳನ್ನು ಬಳಸಿದರೆ, ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದರು. 

ಆಧುನಿಕ ಯುಗದಲ್ಲಿ ಎಲ್ಲರೂ ಸಂಸ್ಕರಿತ ಆಹಾರ ಪದ್ಧತಿ ಅಳವಡಿಸಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜನರು ಸಿರಿಧಾನ್ಯಗಳ ಆಹಾರ ಬಳಸಲು ಪ್ರಾರಂಭಿಸಬೇಕು. ರೈತರು ಇವುಗಳನ್ನು ಬೆಳೆಯಬೇಕು ಎಂದು ಕೃಷಿ ಜಂಟಿ ನಿರ್ದೇಶಕ ಅಬೀದ್ ತಿಳಿಸಿದರು. 

ಕಾರ್ಯಕ್ರಮಕ್ಕೂ ಮುನ್ನ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ, ಜಿಲ್ಲಾಧಿಕಾರಿ ಪ್ರಭು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಎತ್ತಿನ ಬಂಡಿಯಲ್ಲಿ ಭವ್ಯ ಮೆರವಣಿಗೆಯ ಮೂಲಕ ವೇದಿಕೆಗೆ ಕರೆ ತರಲಾಯಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ರೈತರು, ಸ್ವಸಹಾಯ ಸಂಘಗಳ ಮಹಿಳೆಯರು, ಕೃಷಿ, ತೋಟಗಾರಿಕೆ ಇಲಾಖೆಯ ಪರಿಕರ ಹಾಗೂ ಸಿರಿಧಾನ್ಯಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಕೃಷಿ ವಸ್ತು ಪ್ರದರ್ಶನದಲ್ಲಿದ್ದ, ವಿವಿಧ ತಳಿಯ ಎತ್ತುಗಳು, ಕುರಿಗಳು, ಸಿರಿ ಧಾನ್ಯಗಳ ಸಂಸ್ಕರಣ ಯಂತ್ರಗಳು, ಫಲಪುಷ್ಪಗಳು ಹಾಗೂ ಬಗೆಬಗೆಯ ಖಾದ್ಯಗಳು ಬಂದಿದ್ದ ಜನರ ಆಕರ್ಷಣೆಯಾಗಿದ್ದವು. 

ಕಾರ್ಯಕ್ರಮದಲ್ಲಿ ಉದಯೋನ್ಮುಖ ರೈತರು ಮತ್ತು ಮರೆತು ಹೋದ ಖಾದ್ಯಗಳು ಪಾಕಸ್ಪರ್ಧೆಯಲ್ಲಿ ವಿಜೇತರಾದ ಜಿಲ್ಲೆಯ ಒಂಬತ್ತು ಮಂದಿ ಮಹಿಳೆಯರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲೆಯ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಟ್, ತಹಶೀಲ್ದಾರ್ ಅರವಿಂದ್ ಕೆ.ಎಂ, ಜಿ.ಕೆ. ಹೊನ್ನಯ್ಯ, ಕೆ.ಜಿ. ರಮೇಶ್, ಮುನಿರಾಜು, ರಾಜೇಶ್, ರಾಕೇಶ್, ಪ್ರಭಾಕರ್ ರೆಡ್ಡಿ, ಪಾಪಿರೆಡ್ಡಿ, ನಂಜಿರೆಡ್ಡಿ, ದೀಪಶ್ರೀ, ಭವ್ಯಪ್ರಭ ನಾರಾಯಣಗೌಡ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕೃಷಿಕ ಸಮಾಜ ನಿರ್ದೇಶಕರು ಹಾಗೂ ರೈತರು ಭಾಗವಹಿಸಿದ್ದರು.

ಸಿರಿಧಾನ್ಯ ಮೇಳಕ್ಕೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಸೇರಿ ಇತರರು ಎತ್ತಿನ ಬಂಡಿಯಲ್ಲಿ ಬಂದರು
ಪೋಸ್ಟರ್ ಬಿಡುಗಡೆ
ಪಾಕಸ್ಪರ್ಧೆ ವಿಜೇತರಾದ ಮಹಿಳೆಯರಿಗೆ ಸನ್ಮಾನ
ನಮ್ಮ ಆಹಾರ ಪದ್ಧತಿಯನ್ನು ನಮ್ಮ ಅಡುಗೆ ಮನೆಯಲ್ಲಿ ಕಳೆದುಕೊಂಡಿದ್ದೇವೆ. ಇದರಿಂದ ಆಯುಷ್ಯವೂ ಕಳೆದುಕೊಳ್ಳುತ್ತಿದ್ದೇವೆ. ಸಿರಿಧಾನ್ಯಗಳನ್ನು ಬೆಳೆಯಲಾರಂಭಿಸಿ ಅವುಗಳಿಗೆ ಮೌಲ್ಯವರ್ಧನೆ ಮಾಡಿದರೆ ಹೆಚ್ಚಿನ ಲಾಭವಾಗಲಿದೆ. 
ಎಂ.ಆರ್. ಶಿವಣ್ಣ ಅಧ್ಯಕ್ಷ ಜಿಲ್ಲಾ ಕೃಷಿಕ ಸಮಾಜ

ಆಹಾರ ಭದ್ರತೆ ಇದೆ; ಪೌಷ್ಟಿಕ ಭದ್ರತೆ ಇಲ್ಲ

ನಮ್ಮ ಸಂಸ್ಕೃತಿಯಲ್ಲಿ ದೇವರ ಬಿಟ್ಟರೆ ಋಷಿ ಮುನಿಗಳು ಮತ್ತು ರೈತರಿಗೆ ಜನರು ಹೆಚ್ಚಿನ ಮಾನ್ಯತೆ ನೀಡುತ್ತಾರೆ. ಈ ಬಗ್ಗೆ ರೈತಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಆಹಾರದ ಭದ್ರತೆ ಮಾತ್ರ ಇದೆ. ಆದರೆ ಪೌಷ್ಟಿಕ ಭದ್ರತೆ ಇನ್ನೂ ನಿರ್ಮಾಣವಾಗಿಲ್ಲ ಎಂದು ಜಿಲ್ಲಾಧಿಕಾರಿ ಪ್ರಭು ಜಿ ಅವರು ಬೇಸರ ವ್ಯಕ್ತಪಡಿಸಿದರು. 

ಸಿರಿಧಾನ್ಯ ಬಳಕೆ ನಮ್ಮ ಸಂಸ್ಕೃತಿ ಹೆಗ್ಗುರುತು ಹಾಗೂ ವಿಶ್ವಸಂಸ್ಥೆ ಸಹ ಸಿರಿಧಾನ್ಯ ದಿನ ಆಚರಿಸಬೇಕು ಎಂಬುದಾಗಿ ಹೇಳಿದೆ. ಇಂದಿನ ಆಹಾರ ಪದ್ಧತೆಯಿಂದ ಯುವ ಸಮೂಹವು ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದೆ. ಸಿರಿಧಾನ್ಯಗಳ ಬಳಕೆಯಿಂದ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಾರಕ್ಕೆ ಒಮ್ಮೆಯಾದರೂ ಸಿರಿಧಾನ್ಯ ಬಳಸಬೇಕು. ಆದರೆ ನಮ್ಮಲ್ಲಿ ಅಸ್ತಿತ್ವದಲ್ಲಿರುವ ಸಿರಿಧಾನ್ಯಗಳ ಬಳಕೆಯನ್ನು ನಾವು ಕಡಿಮೆ ಮಾಡುತ್ತಿದ್ದೇವೆ ಎಂದು ಹೇಳಿದರು. 

‘ರೈತರಿಗೆ ಅಗತ್ಯ ಸೌಲಭ್ಯ’  ರೈತರ ಸಂಕಷ್ಟಗಳ ಪರಿಹಾರಕ್ಕಾಗಿ ಜಿಲ್ಲಾಡಳಿತವು ಕ್ರಮ ಕೈಗೊಳ್ಳಲಿದೆ. ಈಗಾಗಲೇ ಜಿಲ್ಲೆಯಲ್ಲಿ 32 ಸಾವಿರ ರೈತರಿಗೆ ಸಾಗುವಳಿ ಪತ್ರ ನೀಡಲಾಗಿದೆ. ಆದರೆ ಗಡಿ ಗುರುತು ಮಾಡದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಲಾಗುವುದು. ಕೃಷಿ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ನೈಜ ರೈತರಿಗೆ ಸೌಲಭ್ಯ ಕೊಡಿಸುವುದು ರೈತರಿಗೆ ಭದ್ರತೆ ನೀಡುವ ವಿಮಾ ಯೋಜನೆ ಅಳವಡಿಸಿಕೊಳ್ಳಲು ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭು ಜಿ ತಿಳಿಸಿದರು. 

ರೈತರು ಸಹ ವೈವಿಧ್ಯತೆ ರೂಢಿಸಿಕೊಳ್ಳಬೇಕು. ಒಂದೇ ಬೆಳೆಗೆ ಜೋತುಬೀಳದೆ ಬಗೆಬಗೆಯ ಬೆಳೆಗಳನ್ನು ಬೆಳೆಯಬೇಕು. ಇದಕ್ಕೆ ಶಕ್ತಿ ತುಂಬಲು ಸರ್ಕಾರದಲ್ಲಿ ಹಲವು ಯೋಜನೆಗಳಿವೆ ಇವುಗಳನ್ನು ಮನೆ ಮನೆಗೆ ತಲುಪಿಸಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.